ವಿವೇಕವಾಣಿ ಮನದ ಕ್ಲೋಭೆಯನ್ನು ನಿವಾರಿಸುತ್ತದೆ : ವಿ.ಜಿ. ಭಟ್
ಪುತ್ತೂರು: ಸ್ವಾಮಿ ವಿವೇಕಾನಂದರ ವಾಣಿ ಮನದಲ್ಲಿನ ಕ್ಲೋಭೆಗಳನ್ನು ನಿವಾರಿಸಲು ಸಮರ್ಥವಾದದ್ದು. ಮಾನವ ದೇಹದಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯನ್ನು ಬಡಿದೆಬ್ಬಿಸುವುದೇ ಶಿಕ್ಷಣ ಎಂಬ ವಿವೇಕಾನಂದರ ಮಾತಿನಂತೆ ಮನಸ್ಸು ಮತ್ತು ದೇಹದ ಬೆಳವಣಿಗೆಯಲ್ಲಿ ಸಮತೋಲನವಾಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಜಿ ಭಟ್ ಹೇಳಿದರು.
ಅವರು ಕಾಲೇಜಿನಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಮಂಗಳೂರು ವಿ.ವಿ. ಮಟ್ಟದ ಸಾಹಿತ್ಯ- ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿವೇಕಾನಂದರ ಪ್ರಕಾರ ವಿಷಯ ಸಂಗ್ರಹಣೆ ಮಾತ್ರ ಶಿಕ್ಷಣ ಅಲ್ಲ, ಏಕಾಗ್ರತೆಯೇ ಶಿಕ್ಷಣ. ಬುದ್ಧಿ ಮತ್ತು ಮನಸ್ಸು ಒಟ್ಟೊಟ್ಟಿಗೆ ಬೆಳೆಯಬೇಕಾದರೆ ಏಕಾಗ್ರತೆ ಅಗತ್ಯ. ಮಾತ್ರವಲ್ಲದೆ ರಾಷ್ಟ್ರಪ್ರೇಮ, ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ವಿವೇಕಾನಂದರು ಮಾಡಿದವರು. ಅದು ನಮ್ಮ ಧ್ಯೇಯವೂ ಆಗಬೇಕಾಗಿದೆ. ಆಗ ಮಾತ್ರ ಸಾಧನೆಯ ದಾರಿ ಸುಲಭ ಸಾಧ್ಯವಾಗುವುದು ಎಂದು ಕಿವಿ ಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಶಂಕರನಾರಾಯಣ ಭಟ್ ಮಾತನಾಡಿ ಯಶಸ್ಸಿನ ರಹಸ್ಯ ಇರುವುದು ಏಕಾಗ್ರತೆಯಲ್ಲಿ. ಏಕಾಗ್ರತೆ ಇಲ್ಲದೇ ಯಶಸ್ಸು ಗಳಿಸುವುದು ಕಷ್ಟ. ನಮ್ಮ ಚಟುವಟಿಕೆಗಳೇ ಏಕಾಗ್ರತೆಗೆ ಕಾರಣವಾಗುತ್ತದೆ. ಅದಕ್ಕಾಗಿ ಉತ್ತಮ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಬೇಕು. ಏಕಾಗ್ರತೆ ಹೆಚ್ಚಾದಾಗ ಚಂಚಲತೆ ಕಡಿಮೆಯಾಗಲೆಬೇಕು ಎಂದು ತಿಳಿಸಿದರು.
ಈ ಸಂದರ್ಭ ಕಾರ್ಯಕ್ರಮಗಳ ಸಂಯೋಜಕ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ನರಸಿಂಹ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ರೋಹಿಣಾಕ್ಷ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಂದು ಬಹುಮಾನ ವಿತರಣೆ ನಡೆಯಲಿದೆ.