ವಿವೇಕಾನಂದಕ್ಕೆ ಭೇಟಿ ಕೊಟ್ಟ ಆಸ್ಟ್ರೇಲಿಯಾದ ಜೂಲಿಯನ್ ಫಾಂಗ್ – ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಪುತ್ತೂರು: ಭಾರತಕ್ಕೆ ಭೇಟಿ ಕೊಟ್ಟ ನಂತರ ಹಲಸಿನ ಬಗೆಗೆ ಅನೇಕ ವಿಚಾರಗಳು ತಿಳಿದವು. ಅದರಲ್ಲೂ ಅಡುಗೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವುದರಿಂದ ಹಲಸಿನ ಕಾಯಿ ಹಾಗೂ ಹಣ್ಣನ್ನು ಅಡುಗೆಯಲ್ಲಿ ಬಳಸುವ ಬಗೆಗೆ ಅರಿತುಕೊಳ್ಳಲು ಸಾಧ್ಯವಾಯಿತು. ಹಲಸು ಅತ್ಯಂತ ರುಚಿಕರವಾದ ಅಧ್ಬುತ ಹಣ್ಣು ಎಂದು ಆಸ್ಟ್ರೇಲಿಯಾದ ಯುವ ಹಲಸು ಕಾರ್ಯಕರ್ತ ಜೂಲಿಯನ್ ಫಾಂಗ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಸೋಮವಾರ ಭೇಟಿಕೊಟ್ಟು ವಿಭಾಗವು ಆಯೋಜಿಸುತ್ತಿರುವ ಕೃಷಿ-ಖುಷಿ ಕಾರ್ಯಕ್ರಮವನ್ನು ಮೆಚ್ಚಿಕೊಂಡದ್ದಲ್ಲದೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಹಲಸಿನ ಹಣ್ಣನ್ನು ಮಾರುಕಟ್ಟೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸದಿರುವ ಬಗೆಗೆ ಅಚ್ಚರಿ ವ್ಯಕ್ತಪಡಿಸಿದ ಅವರು ಹಲಸಿನ ಮಾರುಕಟ್ಟೆಯನ್ನು ಸ್ಥಾಪಿಸುವ, ಹಲಸಿನ ಬಗೆಗೆ ಜಾಗೃತಿ ಮೂಡಿಸುವ ಬಗೆಗೆ ಆಶಯ ವ್ಯಕ್ತಪಡಿಸಿದರು. ವಿವಿಧ ಹಣ್ಣುಗಳಲ್ಲಿ ಹಲಸಿನ ಹಣ್ಣಿಗೆ ಅತ್ಯಂತ ಹೆಚ್ಚು ಅಂಕಗಳನ್ನು ನೀಡಬಹುದು. ತಾನು ಸದ್ಯ ಆಸ್ಟ್ರೇಲಿಯಾಕ್ಕೆ ಹಿಂದಿರುಗುತ್ತಿದ್ದರೂ ಮತ್ತೊಮ್ಮೆ ಭಾರತಕ್ಕೆ ಬಂದು ಹಲಸಿನ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಭಾರತ ಅತ್ಯಂತ ಉತ್ತಮ ಅನುಭವವನ್ನು ತನಗೆ ಕೊಟ್ಟಿದೆ. ಇಲ್ಲಿನ ವಾತಾವರಣ, ಜನಗಳ ಪ್ರೀತಿ ಅಮೋಘವಾದದ್ದು. ಇಲ್ಲಿನ ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ಈ ದೇಶ ತನಗೆ ಅನೇಕ ಹೊಸ ಸಂಗತಿಗಳನ್ನು ಕಲಿಸಿದೆ. ಇಲ್ಲಿಂದ ತೆರಳಿದ ನಂತರ ಸಾಮಾಜಿಕ ಮಾಧ್ಯಮ, ಮಿಂಚಂಚೆಗಳ ಮೂಲಕ ನಿರಂತರವಾಗಿ ಇಲ್ಲಿನವರೊಂದಿಗೆ ಸಂಪರ್ಕ ನಡೆಸುವುದಾಗಿ ಹೇಳಿದ ಅವರು ಆರಂಭದಲ್ಲಿ ಇಲ್ಲಿನವರೊಂದಿಗೆ ವ್ಯವಹರಿಸುವಾಗ ಭಾಷಾ ತೊಡಕು ಕಂಡು ಬಂದರೂ ಕ್ರಮೇಣ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಎಂದು ನುಡಿದರು.
ಸಮನ್ವಯಕಾರರಾಗಿ ಆಗಮಿಸಿದ್ದ ಅಡಿಕೆ ಪತ್ರಿಕೆಯ ಸಂಪಾದಕ ರ್ಶರೀ ಪಡ್ರೆ ಮಾತನಾಡಿ ಭಾರತದಲ್ಲಿ ಸುಮಾರು ಎಪ್ಪತ್ತು ಶೇಕಡಾಕ್ಕಿಂತಲೂ ಅಧಿಕ ಹಲಸಿನ ಹಣ್ಣುಗಳು ನಿರರ್ಥಕವಾಗಿ ಹೋಗುತ್ತಿವೆ. ಮನೆ ಮನೆಗಳಲ್ಲಿ ಹಲಸಿನ ಜಾಗೃತಿ ಮೂಡಬೇಕಿದೆ. ನಾವು ಹಲಸಿನ ಕಾಯಿ ಹಾಗೂ ಹಣ್ಣುಗಳನ್ನು ವ್ಯಾಪಕವಾಗಿ ಅಡುಗೆಯಲ್ಲಿ ಬಳಸುವುದು ಹಲಸಿನ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಕಾರ್ಯವೆನಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ಓಂಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.