ವಿವೇಕಾನಂದದಲ್ಲಿ ಆಹಾ ಆಹಾರ” ಕೃತಿ ಬಿಡುಗಡೆ
ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಜನರು ಹೊರಜಗತ್ತಿನ ತಿಂಡಿ ತಿನಸುಗಳಿಗೆ ಮಾರುಹೋಗುತ್ತಿದ್ದಾರೆ. ಜನರಿಗೆ ಮನೆಯಲ್ಲಿ ಮಾಡುವ ತಿಂಡಿಗಳಿಗಿಂತ ಪಿಜ್ಜಾ, ಬರ್ಗರ್ನಂತಹ ತಿಂಡಿಗಳೇ ಇಷ್ಟವಾಗುತ್ತಿವೆ. ನಾವು ವಿಷಯುಕ್ತ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ಲೇಖಕಿ ಸವಿತಾ ಭಟ್ ಅಡ್ವಾಯಿ ಹೇಳಿದರು.
ಅವರು ಗುರುವಾರ ವಿವೇಕಾನಂದ ಕಾಲೇಜಿನಲ್ಲಿ ಹಿಂದಿ ಸಂಘ ಹಾಗೂ ಮಹಿಳಾಸಂಘದ ಆಶ್ರಯದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ವೆಂಪಾಷಾ ಅವರ ಆಹಾ ಆಹಾರ ಪುಸ್ತಕ ಬಿಡುಗಡೆಗೊಳಿಸಿ ಅಡುಗೆ ಮತ್ತು ಆರೋಗ್ಯ ಎನ್ನುವ ವಿಚಾರವಾಗಿ ಮಾತಾಡಿದರು.
ಇಂದು ಪ್ರತಿಯೊಬ್ಬರ ಮನೆಯಲ್ಲಿ ಮಾತ್ರೆಗಳಿವೆ. ಎಲ್ಲರೂ ವಿಷ ಆಹಾರ ಸೇವಿಸುವುದರಿಂದ ಇದರ ಅಗತ್ಯತೆ ನಮಗೆ ಅನಿವಾರ್ಯವಾಗಿ ತೋರುತ್ತಿದೆ. ಒಂದು ಕೊಂಡರೆ ಒಂದು ಉಚಿತ ಎನ್ನುವ ರೀತಿಯಲ್ಲಿ ಸಂತೆಯಲ್ಲಿ ತರಕಾರಿಯೊಂದಿಗೆ ಅದಕ್ಕೆ ಸಿಂಪಡಿಸಿದ ವಿಷಯುಕ್ತ ರಾಸಾಯನಿಕಗಳು ಉಚಿತವಾಗಿ ಲಭಿಸುತ್ತವೆ. ನಮ್ಮ ಆಧುನಿಕ ಜೀವನದ ಆಹಾರ ಪದ್ದತಿ ಹಾಗೂ ಜೀವನ ಕ್ರಮ ನಮ್ಮ ರೋಗಗಳಿಗೆ ಕಾರಣ. ನಾವು ಅಂತಹ ಆಹಾರಗಳನ್ನು ಸೇವಿಸಬಾರದು. ಉತ್ತಮ ಗುಣದ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ನಾವು ಅಡುಗೆಯನ್ನು ಪ್ರೀತಿಯಿಂದ ಮಾಡಬೇಕು. ಅಂತೆಯೇ ಶುಚಿತ್ವವನ್ನು ಕಾಯ್ದುಕೊಳ್ಳಬೇಕು. ಆಗ ಅದು ನಮ್ಮ ಆರೋಗ್ಯದ ಮೇಲೆ ಅತ್ಯತ್ತಮ ಪರಿಣಾಮ ಬೀರುತ್ತದೆ. ಇದರೊಂದಿಗೆ ದೈಹಿಕ ಕೆಲಸವನ್ನೂ ಮಾಡಬೇಕು. ನಮಗೆ ಪ್ರಕೃತಿ ಹಲವಾರು ದವಸ ಧಾನ್ಯಗಳನ್ನು ನೀಡಿದೆ. ಅದನ್ನು ಉಪಯೋಗಿಸಿಕೊಂಡು ಆರೋಗ್ಯಾಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಂಗ್ಲವಿಭಾಗದ ಉಪನ್ಯಾಸಕಿ ಮೋತಿ ಬಾ ಮಾತನಾಡಿ, ನಾವು ತಿನ್ನುವ ಆಹಾರ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ದೇಹಕ್ಕೆ ಹಿತವೆನಿಸುವ ಪೌಷ್ಟಿಕ ಆಹಾರ ಸೇವಿಸಬೇಕು. ಇತಿ ಮಿತಿಯ ಆಹಾರದಿಂದ ಅನಾರೋಗ್ಯವನ್ನು ದೂರವಿಡಲು ಸಾಧ್ಯ ಎಂದರು.
ಆಹಾ ಆಹಾರ ಕೃತಿಯ ಕರ್ತೃ ವೆಂಪಾಷರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸಂಘದ ಸಂಯೋಜಕಿ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥೆ ಡಾ ದುರ್ಗಾರತ್ನ ಪ್ರಸ್ತಾವಿಸಿ, ಸ್ವಾಗತಿಸಿದರು. ಮಹಿಳಾ ಸಂಘದ ಕಾರ್ಯದರ್ಶಿ ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಸ್ವಾತಿ ಆಚಾರ್ಯ ವಂದಿಸಿದರು. ವಿದ್ಯಾರ್ಥಿನಿ ಸ್ಮಿತಾ ಮಾಧವಿ ಕಾರ್ಯಕ್ರಮ ನಿರೂಪಿಸಿದರು.