ವಿವೇಕಾನಂದದಲ್ಲಿ ಡಾ.ಅನ್ನಪೂರ್ಣ ಕಿಣಿಗೆ ಸನ್ಮಾನ
ಪುತ್ತೂರು: ಜೀವನದಲ್ಲಿ ಸ್ಪಷ್ಟವಾದ ಗುರಿ, ಆತ್ಮವಿಶ್ವಾಸ ಇದ್ದಾಗ ನಮ್ಮ ನಿಗದಿತ ಗುರಿಯನ್ನು ತಲಪುವುದು ಸಾಧ್ಯ. ನಮ್ಮ ಗುರಿಯನ್ನು ತಲಪಿದ ನಂತರ ನಮಗೆ ನಾವೇ ಸ್ಪರ್ಧಿಗಳಾಗಬೇಕು. ಆಗ ನಮ್ಮ ಸಾಧನೆಯ ಮಟ್ಟ ವೃದ್ಧಿಸುತ್ತಲೇ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ನ್ಯೂಯಾರ್ಕ್‌ನ ಮೌಂಟ್ ಸಯನೈ ಆಸ್ಪತ್ರೆಯ ನಿರ್ದೇಶಕಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಆಂಜಿಯೋಪ್ಲಾಸ್ಟ್ ಚಿಕಿತ್ಸೆಯಲ್ಲಿ ವಿಶ್ವದಾಖಲೆ ಬರೆದ ಡಾ.ಅನ್ನಪೂರ್ಣ ಕಿಣಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಶುಕ್ರವಾರ ಆಡಳಿತ ಮಂಡಳಿ, ಅಧ್ಯಾಪಕವೃಂದ, ವಿದ್ಯಾರ್ಥಿ ಸಂಘ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ನಮ್ಮ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಗ ನಿಜವಾದ ಮನಃಪೂರ್ವಕ ಪ್ರಯತ್ನ ಸಾಕಾರಗೊಳ್ಳಲು ಸಾಧ್ಯ. ವ್ಯಕ್ತಿ ತನ್ನ ಬದುಕಿನಲ್ಲಿ ಯಾವುದೇ ಹಂತವನ್ನು ತಲುಪುವುದಕ್ಕೆ ತಾನು ಮಾಡುತ್ತಿರುವ ಕೆಲಸವನ್ನು ಪ್ರೀತಿಸುವುದು ಬಹಳ ಮುಖ್ಯ ಎಂದರಲ್ಲದೆ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಎಷ್ಟೇ ಕಠಿಣ ಪರಿಶ್ರಮದಲ್ಲಿ ತೊಡಗಿಕೊಂಡಿದ್ದರೂ ಸರಿಯಾದ ನಿದ್ದೆ ಹಾಗೂ ಆಹಾರ ಅಗತ್ಯ. ಎಲ್ಲಾ ಸಾಧನೆಗೂ ಆರೋಗ್ಯ ಮುಖ್ಯ ಎಂಬುದನ್ನು ಮರೆಯಬಾರದು ಎಂದು ನುಡಿದರು.
ಅಭಿನಂದನಾ ಭಾಷಣ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಡಾ.ರವಿಪ್ರಕಾಶ್ ಕಜೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ದೇಹದಲ್ಲೂ ಹೃದಯ ಅತ್ಯಂತ ನಾಜೂಕಿನ ಅಂಗ. ಡಾ.ಅನ್ನಪೂರ್ಣ ಕಿಣಿ ಹೃದಯಕ್ಕೆ ಸಂಬಂಧಿಸಿದ ಶಸ್ತ್ರ ಚಿಕೆತ್ಸೆಯಲ್ಲಿ ವಿಶೇಷ ಸಾಧನೆ ಮಾಡಿದವರು. ತನ್ಮೂಲಕ ಅನೇಕ ಹೃದಯಗಳನ್ನು ಅರಳಿಸಿದವರು. ಅವರು ಕಾರ್ಯನಿರ್ವಹಿಸುತ್ತಿರುವ ಮೌಂಟ್ ಸಯನೈ ಆಸ್ಪತ್ರೆ ಅತ್ಯಂತ ಗೌರವಕ್ಕೆ ಅರ್ಹವಾಗಿರುವ ಆಸ್ಪತ್ರೆ. ಅಲ್ಲಿ ವೈದ್ಯರಾಗಿರುವುದೂ ಬಹುದೊಡ್ಡ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಡಾ.ಕಿಣಿಯವರು ಶಸ್ತ್ರಚಿಕಿತ್ಸೆ ನಡೆಸಿದ ನ್ಯೂಯಾರ್ಕ್‌ನ ಸುಮಾರು ೨೪೩೭ ಪ್ರಕರಣಗಳಲ್ಲಿ ೨೪೬೨ ಪ್ರಕರಣಗಳೂ ಯಶಸ್ಸು ಕಂಡಿವೆ. ಇಷ್ಟೊಂದು ಯಶಸ್ಸನ್ನು ಬೇರೆ ಯಾವ ವೈದ್ಯರೂ ಕಂಡಿಲ್ಲ. ಇದು ವಿಶ್ವದಲ್ಲೇ ಬಹುದೊಡ್ಡ ದಾಖಲೆಯಾಗಿದೆ. ಅಲ್ಲದೆ ಅಮೇರಿಕಾದ ಆರೋಗ್ಯ ಇಲಾಖೆ ವೈದ್ಯರಿಗೆ ಕೊಡಮಾಡುವ ಸ್ಟಾರ್ ಗೌರವದಲ್ಲಿ ಟು ಸ್ಟಾರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಥ ಸಾಧನೆಯನ್ನು ನಮ್ಮೂರಿನ ಹೆಣ್ಣುಮಗಳೊಬ್ಬಳು ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಡಾ.ಕಿಣಿಯವರನ್ನು ಸನ್ಮಾನಿಸಿ ಮಾತನಾಡಿದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ನಮ್ಮ ದೇಶದ ಅನೇಕರು ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಅಂತೆಯೇ ನಮ್ಮವರೇ ಆದ ಡಾ.ಅನ್ನಪೂರ್ಣ ಕಿಣಿಯವರೂ ಅಮೇರಿಕಾದಲ್ಲಿ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಅವರು ನಿಜಕ್ಕೂ ಅಭಿನಂದನಾರ್ಹರು ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದದ ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು. ಉಪನ್ಯಾಸಕಿಯರಾದ ಸರಸ್ವತಿ ಸಿ.ಕೆ ಹಾಗೂ ರೇಯಾಂಕ ಕಾರ್ಯಕ್ರಮ ನಿರ್ವಹಿಸಿದರು.