ವಿವೇಕಾನಂದದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ
ಪುತ್ತೂರು: ಒಬ್ಬ ಉತ್ತಮ ಅಧ್ಯಾಪಕನಿಗೆ ವಿದ್ಯಾರ್ಥಿಗಳು ನೀಡುವ ಪ್ರಮಾಣ ಪತ್ರವೇ ನಿಜವಾದ ಪ್ರಶಸ್ತಿ. ಇಂದು ವಿದ್ಯಾರ್ಥಿಗಳು ಮತ್ತು ಗುರುಗಳ ನಡುವಿನ ಅವಿನಾಭಾವ ಸಂಬಂಧಗಳು ಮರೆಯಾಗುತ್ತಿವೆ. ದೊರಕಿದ ಪ್ರಶಸ್ತಿ ಗುರುಪರಂಪರೆಗೆ ಸಲ್ಲಬೇಕಾದುದು ಎಂದು ಬೆಂಗಳೂರಿನ ಚನ್ನೇನಹಳ್ಳಿಯ ವೇದವಿಜ್ಞಾನ ಶೋಧ ಸಂಸ್ಥಾನದ ಸಂಶೋಧನಾ ಮಾರ್ಗದರ್ಶಕ ಮತ್ತು ಪ್ರಾಧ್ಯಾಪಕ ಡಾ.ಜಿ.ಎನ್ ಭಟ್ ಹೇಳಿದರು.
ಅವರು ಶುಕ್ರವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ’ಶಿವರಾಮ ಕಾರಂತ ಉಪನ್ಯಾಸ’ ಮತ್ತು ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಒಳ್ಳೆಯ ಕೆಲಸವನನ್ನು ಮಾಡಿದರೆ ಎಂದೂ ದುರ್ಗತಿ ಬಾರದು. ನಾವು ಯಾವಾಗಲೂ ಒಳ್ಳೆಯ ಮನಸ್ಸಿನಿಂದ ಕೆಲಸವನ್ನು ಮಾಡಿದರೆ ನಮಗೆ ಖಂಡಿತ ಕೆಡಕಾಗುವುದಿಲ್ಲ. ವಿದ್ಯಾರ್ಥಿಗಳು ದೇವರಿಗೆ ಸಮನಾದವರು. ವಿದ್ಯಾರ್ಥಿಗಳ ತಪ್ಪನ್ನು ತಿದ್ದಿ ಅವರ ಜೊತೆಗೆ ಉತ್ತಮ ಬಾಂಧವ್ಯವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಅಧ್ಯಾಪಕರನ್ನು ಗೌರವಿಸಬೇಕಾದುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದು ನುಡಿದರು.
ಮತ್ತೊರ್ವ ಅತಿಥಿ ಕಟೀಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೊತ್ತರ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಪದ್ಮನಾಭ ಮರಾಠೆ ಅಭಿನಂದನಾ ಭಾಷಣ ಮಾಡಿ, ಜ್ಞಾನಾಂಶದಿಂದ ವಿವೇಕ ಮೂಡುತ್ತದೆ. ಭಾವನಾಂಶದಿಂದ ಆನಂದ ಸಿಗುತ್ತದೆ. ಇವೆಲ್ಲವೂ ತನ್ನ ಜೀವನದಲ್ಲಿ ರೂಢಿಸಿಕೊಂಡವರು ಜಿ.ಎನ್ ಭಟ್. ಅವರು ತಾನೊಬ್ಬ ಸಾಮಾನ್ಯ ಪ್ರತಿಭೆಯಾಗಿ ಹಲವಾರು ಪ್ರತಿಭೆಗಳನ್ನು ಪ್ರೋತ್ಸಾಹಿಸಿದವರು ಎಂದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿ ಮುಂಬೈನ ಡಾ.ವ್ಯಾಸರಾವ್ ನಿಂಜೂರು ’ನಾ ಕಂಡ ಕಾರಂತ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ, ಕಾರಂತರು ಕರ್ನಾಟಕಕ್ಕೆ ಮಾತ್ರವಲ್ಲದೇ, ಇಡೀ ದೇಶಕ್ಕೆ ಶ್ರೇಷ್ಠ ಸಾಹಿತಿ. ಅವರು ತಮ್ಮ ಸರಳತೆ, ನಿಷ್ಠುರತೆ, ನೇರ ನಡೆ ನುಡಿಗಳಿಗೆ ಪ್ರಸಿದ್ಧಿಯಾಗಿದ್ದರು. ಇವುಗಳ ಜೊತೆಗೆ ಎಲ್ಲರಿಗೂ ಆಪ್ತರಾಗಿದ್ದವರು. ಅವರೆಷ್ಟು ಕಠೋರವೋ ಅಷ್ಟೇ ಮೃದು. ಅವರು ಎಂದೂ ಇನ್ನೊಬ್ಬರಿಗೆ ನೋವಾಗುವಂತಹ ರೀತಿಯಲ್ಲಿ ನಡೆದುಕೊಂಡವರಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ, ಆಧುನಿಕ ಸಮಾಜದಲ್ಲಿ ಪ್ರಶಸ್ತಿಗೆ ಯೋಗ್ಯರಾದವರನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸಬೇಕಾಗಿದೆ. ಸಾಹಿತ್ಯ ಕ್ಷೇತ್ರವನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಂಕರ ಸಾಹಿತ್ಯ ಪ್ರಶಸ್ತಿಯ ಸ್ಥಾಪಕ ಸಿದ್ದಮೂಲೆ ಶಂಕರ ನಾರಾಯಣ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ. ಎ.ವಿ ನಾರಾಯಣ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಾತಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್. ಜಿ ಶ್ರೀಧರ ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಹಾಗೂ ಕನ್ನಡ ಸಂಘದ ಸಂಯೋಜಕಿ ಗೀತಾ.ಟಿ ನಿರೂಪಿಸಿದರು.