ವಿವೇಕಾನಂದಲ್ಲಿ ಉಪನ್ಯಾಸಕಿ ಸ್ವಾತಿಯವರಿಗೆ ಬೀಳ್ಕೊಡುಗೆ
ಪುತ್ತೂರು: ಒಬ್ಬ ವ್ಯಕ್ತಿಗೆ ತನ್ನ ವಿದಾಯವನ್ನು ಸ್ವೀಕರಿಸುವುದು ಬಹಳ ಕಷ್ಟ. ತರಗತಿಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಂದ ಎಷ್ಟು ಕಲಿಯುತಾರೆ ಅದೇ ರೀತಿ ಉಪನ್ಯಾಸಕರೂ ವಿದ್ಯಾರ್ಥಿಗಳಿಂದ ಹೊಸ ವಿಚಾರಗಳನ್ನು ಕಲಿಯುತ್ತಾರೆ. ವಿದ್ಯಾರ್ಥಿಗಳ ಪ್ರತಿ ಯಶಸ್ಸಿನಲ್ಲಿ ತನ್ನ ಯಶಸ್ಸನ್ನು ಒಬ್ಬ ನಿಜವಾದ ಉಪನ್ಯಾಸಕ ಕಾಣುತ್ತಾನೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿಯಾಗಿದ್ದ ಸ್ವಾತಿ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜು ನೀಡುವ ಎಲ್ಲಾ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಆಗ ಮಾತ್ರ ಅವರು ಜೀವನದಲ್ಲಿ ಬಹಳ ಎತ್ತರದ ಸ್ಥಾನಕ್ಕೇರಲು ಸಾಧ್ಯ. ಒಳ್ಳೆಯ ಅನುಭವಗಳು ಕೂಡ ವಿದ್ಯಾರ್ಥಿಗಳಲ್ಲಿರಬೇಕು. ಉತ್ತಮ ಅನುಭವಗಳು ಜೀವನದಲ್ಲಿ ಯಶಸ್ಸನ್ನು ತಂದು ಕೊಡಲು ಸಹಕರಿಸುತ್ತವೆ. ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಒಳ್ಳೆಯ ಅನುಭವಗಳು ಸಿಗುತ್ತವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಸ್ವಾತಿಯವರು ವಿಭಾಗದ ಎಲ್ಲಾ ಸಂಗತಿಗಳನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಿದ್ದ ಉಪನ್ಯಾಸಕಿಯಾಗಿದ್ದರು. ಅವರು ಎಲ್ಲಾ ಕಡತಗಳನ್ನು ಬಹಳ ಅಚ್ಚು ಕಟ್ಟಾಗಿ ಜೋಡಿಸುವುದರಲ್ಲಿ ಇನ್ನೊಬ್ಬರಿಗೆ ಮಾದರಿಯಂತಿದ್ದರು. ವಿದ್ಯಾರ್ಥಿಗಳ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಪ್ರಣವ್, ಭುವನೇಶ್ವರಿ ಹಾಗೂ ಜಯಶ್ರೀ ಅಭಿಪ್ರಾಯವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವತಿಯಿಂದ ಸ್ವಾತಿಯವರಿಗೆ ಸ್ಮರಣಿಕೆಯಾಗಿ ಬೆಳ್ಳಿ ದೀಪ ನೀಡಿ ಗೌರವಿಸಲಾಯಿತು.
ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ .ಆರ್ ನಿಡ್ಪಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪೂಜಾಪಕ್ಕಳ.ಎನ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾತಿ ಸುಬ್ರಹ್ಮಣ್ಯ ವಂದಿಸಿದರು.