VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ವಿವಿ ಮಟ್ಟದ ಪ್ರಬಂಧ ಮಂಡನಾ ಸ್ಪರ್ಧೆ

ಪುತ್ತೂರು: ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮತ್ತು ಓದುವ ಹವ್ಯಾಸವನ್ನು ವಿಚಾರ ಸಂಕಿರಣಗಳು ಹೆಚ್ಚಿಸುತ್ತವೆ. ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವವನ್ನೂ ಬೆಳೆಸುತ್ತದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು ಕೇವಲ ವಿದ್ಯಾಭ್ಯಾಸವಿದ್ದರೆ ಸಾಲದು. ಅದರ ಜೊತೆಗೆ ಕೆಲವು ಕೌಶಲ್ಯವನ್ನೂ ರೂಢಿಸಿಕೊಳ್ಳಬೇಕು ಎಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಎ.ಸಿ.ಟಿಯ ಮಾಜಿ ಅಧ್ಯಕ್ಷ ಡಾ. ಜಯಂತ್.ಎಚ್ ಹೇಳಿದರು.

       ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವ ವಿದ್ಯಾಲಯದ ರಸಾಯನ ಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ರಸಾಯನ ಶಾಸ್ತ್ರ ವಿಚಾರ ಸಂಕಿರಣ ಮತ್ತು ರಸಾಯನ ಶಾಸ್ತ್ರ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

       ರಸಾಯನ ಶಾಸ್ತ್ರ ವಿಭಾಗದಲ್ಲಿ ಇಂದು ಅತ್ಯಂತ ಹೆಚ್ಚು ಅವಕಾಶಗಳಿವೆ. ಆದರೆ ಆ ಅವಕಾಶ ಎಲ್ಲರಿಗೂ ಸಿಕ್ಕುವುದಿಲ್ಲ. ಯಾರಲ್ಲಿ ಪ್ರತಿಭೆಯಿದೆಯೋ ಅವರಿಗೆ ಈ ಕ್ಷೇತ್ರದಲ್ಲಿ ಅವಕಾಶಗಳು ಮುಕ್ತವಾಗಿರುತ್ತವೆ. ವಿದ್ಯಾರ್ಥಿಗಳು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರದ ಕಡೆಗೆ ಹೆಚ್ಚು ಗಮನಹರಿಸಿದಾಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿ ಹೇಳಿದರು.

       ವಿಜ್ಞಾನ ಎಂಬ ಪದದ ಅರ್ಥ ಚಿಂತನೆಗೆ ದಾರಿ ಮಾಡಿಕೊಡು ಎಂದು. ಅದು ಜೀವನಕ್ಕೆ ದಾರಿ ಕೂಡ ಹೌದು. ಒಂದು ವಿಚಾರದ ಬಗ್ಗೆ ಸರಿಯಾಗಿ ತಿಳಿಯದೆಯೇ ಇನ್ನೊಬ್ಬರನ್ನು ಅನುಕರಣೆ ಮಾಡುವುದು ತಪ್ಪು. ಕೆಲಸ ಸಿಗುವುದು, ಸಂಬಳ ಪಡೆಯುವ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅದಕ್ಕಿಂತ ಮೊದಲು ನಿಮ್ಮಲ್ಲಿರುವ ಕೌಶಲ್ಯವನ್ನು ಬೆಳೆಸುವುದರ ಬಗ್ಗೆ ಚಿಂತಿಸಿ ಎಂದು ನುಡಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಅರಿಯಲು ಸ್ಪರ್ಧೆಗಳು ಸಹಾಯ ಮಾಡುತ್ತವೆ. ಸ್ಪರ್ಧೆಯ ಅನುಭವಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯವಂತ, ಸದೃಢ ಮನಸ್ಸನ್ನು ಕಟ್ಟಲು ಸಹಕಾರಿಯಾಗಿವೆ. ಇದರ ಜೊತೆಗೆ ನಮಗೆ ತಿಳಿದ ವಿಚಾರವನ್ನು ಹೇಗೆ ಪ್ರಸ್ತುತ ಪಡಿಸಬೇಕೆಂದು ಕೂಡ ತಿಳಿಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

     ಇದೇ ಸಂದರ್ಭದಲ್ಲಿ ೨೦೧೨-೧೩ ಸಾಲಿನಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಂತರ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು.

ಮಂಗಳೂರಿನ ವಿಶ್ವವಿದ್ಯಾಲಯ ರಸಾಯನ ಶಾಸ್ತ್ರ ಪ್ರಾಧ್ಯಾಪಕರ ಸಂಘದ ನಿರ್ದೇಶಕ ಡಾ. ಎಂ.ಸುಂದರ ಮೊಲಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶುತಿ ನಿಶಾ, ಶ್ರೀದೇವಿ ಪ್ರಾರ್ಥಿಸಿದರು. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ  ಪ್ರೊ.ಕೃಷ್ಣ ಕಾರಂತ ವಂದಿಸಿದರು. ವಿದ್ಯಾರ್ಥಿನಿ ಮಿಲನ ಕಾರ್ಯಕ್ರಮವನ್ನು ನಿರೂಪಿಸಿದರು.