ವಿವೇಕಾನಂದದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ
ಪುತ್ತೂರು: ಒಂದು ಪ್ರದೇಶದ ಕಾನೂನನ್ನು ಮಾಡುವ ಸರ್ಕಾರವನ್ನು ರೂಪಿಸುವ ಅವಕಾಶ ಪ್ರಜಾಪ್ರಭುತ್ವ ದೇಶದಲ್ಲಿದೆ. ಅರಾಜಕತೆಯಿರುವ ದೇಶದಲ್ಲಿದ್ದಾಗ ಮಾತ್ರ ನಮಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಯುತ್ತದೆ. ಸಹನೀಯವಾದ ವಾತಾವರಣ ಪ್ರಜಾಪ್ರಭುತ್ವದಲ್ಲಿದೆ. ಆದ್ದರಿಂದ ಇಡೀ ಪ್ರಪಂಚದಲ್ಲಿಯೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ಪ್ರಸಿದ್ಧವಾಗಿದೆ ಎಂದು ಸೈಂಟ್ ಫಿಲೋಮಿನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಧಾಕೃಷ್ಣ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪೊಲಿಟಿಕಲ್ ಫೋರಂ, ಮಾನವಿಕ ಸಂಘ ಮತ್ತು ಎನ್‌ಎಸ್‌ಎಸ್‌ಗಳ ಸಹಯೋಗದಲ್ಲಿ ನಡೆದ ಯುವ ಮತದಾರ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಪಂಚದಲ್ಲಿ ಅದೆಷ್ಟೋ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ. ಅಂತಹ ರಾಷ್ಟ್ರಗಳಲ್ಲಿ ಜನರಿಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಅವಕಾಶವೇ ಇಲ್ಲ. ಭಾರತದಲ್ಲಿ ನಡೆದ ಚುನಾವಣೆಗಳು ಅಸಂಖ್ಯ. ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಜನರು ತಮ್ಮ ಮತವನ್ನು ಕೊಡಬೇಕು. ಯುವಜನರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು ಎಂದು ಅವರು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ ಮಾಧವ ಭಟ್ ಮಾತನಾಡಿ, ಪ್ರತಿಯೊಬ್ಬರೂ ಮತದಾನಕ್ಕೆ ಗೌರವವನ್ನು ಕೊಡಬೇಕು. ತಮ್ಮ ಮತದ ಮೂಲಕ ಪ್ರತಿನಿಧಿಗಳನ್ನು ಆರಿಸುವುದು ನಮ್ಮ ಕರ್ತವ್ಯ. ಆ ಮೂಲಕ ಸಾಮಜಿಕ ಬದಲಾವಣೆಯನ್ನು ತರಬೇಕು. ಯುವಕರು ಯಾವುದೇ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕತೆಯಿಂದ ಮತದಾನ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್.ಕೆ ಮಾತನಾಡಿ, ಪ್ರಜೆಗಳು ಜಾಗೃತರಾದಾಗ ಮಾತ್ರ ಉತ್ತಮ ಆಡಳಿತವನ್ನು ಬಯಸಬಹುದು. ಇಂದು ವಿದ್ಯಾವಂತರು ಮತದಾನ ಮಾಡುವುದು ಕಡಿಮೆಯಾಗುತ್ತಿದೆ. ಶಕ್ತಿಶಾಲಿ ರಾಷ್ಟ್ರಕ್ಕೆ ಉತ್ತಮ ಮತದಾರರ ಅಗತ್ಯವಿದೆ. ಉತ್ತಮ ಆಡಳಿತಕ್ಕೆ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಯುವಕರ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಜೆಯಾದ ನಾನು ನನ್ನ ದೇಶದ ಹಿತಕ್ಕಾಗಿ ನ್ಯಾಯ ಹಾಗೂ ಶಾಂತಿಯುತ ಚುನಾವಣೆಯನ್ನು ಬಯಸಿ ನಿರ್ಭಿತಿಯಿಂದ ಧರ್ಮ,ಜನಾಂಗ,ಜಾತಿ,ಮತ,ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಗೆ ಪ್ರಭಾವಿತನಾಗದೇ ಮತ ಚಲಾಯಿಸುತ್ತೇನೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇನೆ. ಎಂಬ ಪ್ರತಿಜ್ಞೆಯನ್ನು ನೆರೆವರೆಲ್ಲರೂ ಸ್ವೀಕರಿಸಿದರು.