ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ವಿವೇಕಾನಂದ ವಿದ್ಯಾರ್ಥಿಗಳಿಗೆ ವೆಬಿನಾರ್
ಪುತ್ತೂರು : ವಾರ್ತಾ ಮತ್ತು ಪ್ರಸಾರ ಸಚಿವಾಲಯ ಫೀಲ್ಡ್ ಔಟ್ ರಿಚ್ ವಿಭಾಗದ ವತಿಯಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆತ್ಮನಿರ್ಭರ ಭಾರತ ಯೋಜನೆಯಡಿ ಸ್ವ ಉದ್ಯಮ ಆರಂಭದ ಕುರಿತು ಮಾಹಿತಿ ಉಪನ್ಯಾಸದ ವೆಬಿನಾರ್ ಬುಧವಾರ ನಡೆಯಿತು. ಗ್ರಾಮೀಣ ಉದ್ಯೋಗ ವಿಕಾಸ ಯೋಜನೆ, ಪ್ರೈಂ ಮಿನಿಸ್ಟರ್‍ಸ್ ಎಂಪ್ಲಾಯ್ ಮೆಂಟ್ ಜನರೇಶನ್ ಪ್ರೋಗ್ರಾಂ ಹಾಗೂ ಎಂಟರ್ ಪ್ರಿನರ್‌ಶಿಪ್ ಅಂಡ್ ಸ್ಕಿಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮೊದಲಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ವೆಬಿನಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಆತ್ಮನಿರ್ಭರ ಭಾರತ ಇಂದಿನ ಅಗತ್ಯ. ಉದ್ಯೋಗ ಪಡೆಯುವುದಕ್ಕೆ ಪ್ರಯತ್ನಿಸುವ ಬದಲಾಗಿ ಉದ್ಯೋಗ ನೀಡುವುದಕ್ಕೆ ತಯಾರಾಗಬೇಕಿದೆ. ಇಂದು ಉದ್ಯಮ ಆರಂಭಿಸುವುದಕ್ಕೆ ಸಾಕಷ್ಟು ಸರ್ಕಾರೀ ಯೋಜನೆಗಳಿವೆ. ಅದನ್ನು ಬಳಸಿಕೊಳ್ಳುವುದಕ್ಕೆ ನಾವು ತಯಾರಾಗಬೇಕಿದೆ. ನಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳುವ ಮೂಲಕ ಹೊಸ ಸಾಧ್ಯತೆಯ ಅನಾವರಣಕ್ಕೆ ನಾವು ಅಡಿಯಿಡಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮಕ್ಕಾಗಿ ವಾರ್ತಾ ಮತ್ತು ಪ್ರಸಾರ ಖಾತೆ ವಿವೇಕಾನಂದ ಕಾಲೇಜನ್ನು ಆರಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಇಲ್ಲಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ವೆಬಿನಾರ್ ಮಾಡಿಕೊಡಲು ಒಪ್ಪಿರುವುದು ಖುಷಿ ಕೊಟ್ಟಿದೆ. ಕಾಲೇಜಿನಲ್ಲಿಯೂ ವಿದ್ಯಾಥಿಗಳಿಗೆ ಆತ್ಮನಿರ್ಭರ ಭಾರತದ ಕುರಿತು ಜಾಗೃತಿ ಮೂಡಿಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮ ಅತ್ಯುತ್ತಮ ಫಲಶೃತಿ ನೀಡಿದ್ದು ಸುಮಾರು ಇನ್ನೂರು ಮಂದಿ ವಿದ್ಯಾರ್ಥಿಗಳು ಗೂಗಲ್ ಮೀಟ್ ಹಾಗೂ ಐದುನೂರಕ್ಕೂ ಮಿಕ್ಕ ವಿದ್ಯಾಥಿಗಳು ಯೂಟ್ಯೂಬ್ ಮೂಲಕ ವೀಕ್ಷಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಂಎಸ್‌ಎಂಇ (ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್) ಡೆವಲಪ್‌ಮೆಂಟ್ ವಿಭಾಗದ ಉಪನಿರ್ದೇಶಕ ಕೆ.ಸಾಕ್ರಟೀಸ್, ಸಹಾಯಕ ನಿರ್ದೇಶಕ ಎಂ.ಸುಂದರ ಶೇರಿಗಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಫೀಲ್ಡ್ ಔಟ್ ರಿಚ್ ಬ್ಯೂರೋದ ರೋಹಿತ್ ಜಿ ಎಸ್ ಹಾಗೂ ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳೀಕೃಷ್ಣ ಕೆ, ಪ್ರಾಚಾರ್ಯ ಪ್ರೊ.ವಿ.ಜಿ.ಭಟ್ ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜಿನಲ್ಲಿ ಅದಾಗಲೇ ಸ್ವಂತ ಉದ್ಯಮವನ್ನು ಆರಂಭಿಸುವುದರ ಬಗೆಗೆ ತರಬೇತಿ ನೀಡುವ ಯೋಜನೆ ಸಿದ್ಧಗೊಂಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಪದವಿಯ ಜತೆಗೆ ತಯಾರು ಮಾಡುವುದಕ್ಕೆ ಸಿದ್ಧತೆಗಳು ರೂಪುಗೊಂಡಿವೆ. ಮುಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸ್ವ ಉದ್ಯಮ ಆರಂಭಿಸುವುದಕ್ಕೆ ಬೆಂಗಾವಲಾಗಿ ಕಾಲೇಜು ಸಹಕಾರ ನೀಡಲಿದೆ. ಇಂತಹ ಸಂದರ್ಭದಲ್ಲೇ ಈ ಆತ್ಮನಿರ್ಭರ ಭಾರತದ ಕುರಿತಾದ ವೆಬಿನಾರ್ ನಡೆದಿರುವುದು ವಿದ್ಯಾಥಿಗಳಿಗೆ ಹೊಸಸಾಧ್ಯತೆಯೆಡೆ ದೃಷ್ಟಿ ಹಾಯಿಸುವುದಕ್ಕೆ ಹೆಚ್ಚಿನ ಸಹಕಾರಿಯೆನಿಸಿದೆ.