ವಿವೇಕಾನಂದದಲ್ಲಿ ಒಂದು ದಿನದ ವಿಪತ್ತು ನಿರ್ವಹಣಾ ಕಾರ್ಯಾಗಾರ
ಪುತ್ತೂರು: ಅವಘಡ ನಿರ್ವಹಣೆ ಅನ್ನುವುದು ಬಹು ದೊಡ್ಡ ವಸ್ತು ವಿಚಾರ. ಆದರೆ ಆ ಬಗೆಗೆ ಕೆಲವೊಂದು ಸಂಗತಿಗಳನ್ನು ತಿಳಿದುಕೊಂಡಿದ್ದರೆ ದೈನಂದಿನ ಬದುಕಿನಲ್ಲಾಗುವ ಅನೇಕ ಅವಘಡಗಳನ್ನು ಎದುರಿಸುವುದಕ್ಕೆ ಮತ್ತು ಮೀರಿ ನಿಲ್ಲುವುದಕ್ಕೆ ಸಾಧ್ಯ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಆ ಕುರಿತಾದ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯ ವಿಪತ್ತು ನಿರ್ವಹಣಾ ಘಟಕದ ರಾಜ್ಯ ಉಸ್ತುವಾರಿ ಕ್ಯಾ.ವಚವ್ ಕುಮಾರ್ ಕದಂ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ರೋವರ್‍ಸ್ ಅಂಡ್ ರೇಂಜರ್‍ಸ್, ರೆಡ್ ಕ್ರಾಸ್ ಸಂಘಟನೆಗಳು ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾದ ಒಂದು ದಿನದ ವಿಪತ್ತು ನಿರ್ವಹಣಾ ತಯಾರಿ ವಿಷಯದ ಬಗೆಗಿನ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಎರಡು ರೀತಿಯ ವಿಪತ್ತುಗಳನ್ನು ನಾವು ನಿತ್ಯ ಜೀವನದಲ್ಲಿ ಕಾಣುತ್ತೇವೆ. ಮೊದಲನೆಯದು ಪ್ರಾಕೃತಿಕವಾದದ್ದಾದರೆ ಎರಡನೆಯದು ಮಾನವನಿಂದಾದುದು. ಈ ಎರಡೂ ಸಂದರ್ಭಳಲ್ಲಿ ಪಾರಾಗುವ ಉಪಾಯಗಳನ್ನು ತಿಳಿದಿರಬೇಕು. ತಕ್ಷಣಕ್ಕೆ ಲಭ್ಯವಾಗುವ ವಸ್ತುಗಳನ್ನೇ ಬಳಸಿಕೊಂಡು ವಿಪತ್ತನ್ನು ನಿರ್ವಹಿಸುವ ಬಗೆಗೆ ಅರಿಯಬೇಕು. ಕಿಸೆಯಲ್ಲಿರುವ ಕರವಸ್ತ್ರವೂ ವಿಪತ್ತು ನಿರ್ವಹಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡಬಲ್ಲುದು ಎಂದರು.
ಇಂದು ತುರ್ತು ಸೇವೆಗಳೆಂದು ಕೆಲವೊಂದನ್ನು ಪಟ್ಟಿಮಾಡಲಾಗಿದೆ. ಅಗ್ನಿಶಾಮಕ ದಳ, ಅಂಬುಲೆನ್ಸ್, ಆಸ್ಪತ್ರೆಗಳು ಇವೆಲ್ಲವೂ ವಿಪತ್ತಿಗೊದಗುವ ಸೇವೆಗಳು. ಆದರೆ ಇವರು ನಮ್ಮ ಬಳಿ ಬರುವ ಮುನ್ನ ನಾವು ಏನು ಮಾಡಬೇಕು ಅನ್ನುವುದೇ ಅವಘಡ ನಿರ್ವಹಣೆ. ಸುನಾಮಿ, ಭೂಕಂಪ, ಅಪಘಾತ, ಕಟ್ಟಡ ಕುಸಿತ ಹೀಗೆ ನಾನಾ ಬಗೆಯ ವಿಪತ್ತುಗಳನ್ನು ನಾವೇ ಮೊದಲಿಗೆ ಎದುರಿಸುವುದು ಹೇಗೆ ಅನ್ನುವುದು ಬಹು ಮುಖ್ಯವಾದುದು ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರತಿ ದಿನವೂ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ನಾವು ವಿಪತ್ತು ನಿರ್ವಹಣೆಯ ಬಗೆಗೆ ಸ್ವಲ್ಪ ಜ್ಞಾನ ಪಡೆದುಕೊಂಡರೂ ನಿತ್ಯ ಜೀವನದಲ್ಲಾಗುವ ಅನೇಕ ವಿಪತ್ತುಗಳಿಂದ ಸುಲಭವಾಗಿ ಪಾರಾಗಬಹುದು. ಈ ಹಿನ್ನೆಲೆಯಲ್ಲಿ ಕಾರ್ಯಾಗಾರಗಳು ಅತ್ಯಂತ ಅಗತ್ಯ ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿ ಡಾ.ವಿಜಯ ಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀ ಸತ್ಯ ಸಾಯಿ ಸೇವಾ ಕೇಂದ್ರದ ಮಂಗಳೂರು ವಿಭಾಗದ ನಿರ್ವಾಹಕ ನಿರಂಜನ ಹೆಬ್ಬಾರ್ ಉಪಸ್ಥಿತರಿದ್ದರು. ಕಾಲೇಜಿನ ರೋವರ್‍ಸ್ ಅಂಡ್ ರೇಂಜರ್‍ಸ್ ಘಟಕದ ನಿರ್ದೇಶಕ ಈಶ್ವರ ಪ್ರಸಾದ್ ಕೆ.ಎಸ್ ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕದ ನಿರ್ದೇಶಕಿ ಡಾ.ಸ್ಮಿತಾ ಪಿ.ಜಿ ವಂದಿಸಿದರು. ವಿದ್ಯಾಥಿನಿಯರಾದ ಚೈತ್ರಾ ಹಾಗೂ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.