ಪತ್ರಿಕೋದ್ಯಮ ಮತ್ತು ಭಾಷೆ ವಿಷಯದ ಬಗೆಗಿನ ಕಾರ್ಯಾಗಾರ ಉದ್ಘಾಟನೆ – ಇಂಗ್ಲಿಷ್ ಭಾಷೆಯ ಬಗೆಗೆ ತಪ್ಪು ಕಲ್ಪನೆಗಳಿವೆ : ಡಾ.ಮಾಧವ ಭಟ್
ಪುತ್ತೂರು: ಇಂಗ್ಲಿಷ್ ಭಾಷೆಯ ಬಗೆಗೆ ಅನೇಕ ತಪ್ಪು ಕಲ್ಪನೆಗಳಿವೆ. ನಿಜವಾಗಿ ನೋಡಿದರೆ ಅದೊಂದು ಕಲಿಕಾ ಸ್ನೇಹಿ ಭಾಷೆ. ಪತ್ರಕರ್ತರಾಗುವವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯ ಬಳಕೆಯ ಬಗೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಭಾಷೆ ಉತ್ಕೃಷ್ಟವಾದಷ್ಟೂ ಬರವಣಿಗೆಯ ಮೌಲ್ಯ ಹೆಚ್ಚುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು.
ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗವು ತನ್ನ ದಶಮಾನೋತ್ಸವ ಆಚರಣೆಯ ಪ್ರಯುಕ್ತ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ ಪತ್ರಿಕೋದ್ಯಮ ಮತ್ತು ಭಾಷೆ ಎಂಬ ವಿಚಾರದ ಬಗೆಗಿನ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಸಮಸ್ಯೆಗಳ ವೈಭವೀಕರಣವಾಗುತ್ತಿದ್ದು, ಪರಿಹಾರದ ಬಗೆಗಿನ ಅಧ್ಯಯನ, ಬರವಣಿಗೆ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಪತ್ರಕರ್ತರಾಗುವವರು ಜಾಗ್ರತೆ ವಹಿಸಬೇಕು. ಒಳ್ಳೆಯ ಭಾಷೆಯನ್ನು ಕರಗತ ಮಾಡಿಕೊಂಡವನು ಬರೆದ ಬರಹಗಳೆಲ್ಲ ಜನಮಾನಸದಲ್ಲಿ ಉಳಿದುಕೊಳ್ಳುತ್ತವೆ. ಅಲ್ಲವಾದರೆ ಕೆಲವೇ ದಿನಗಳಲ್ಲಿ ಮಾಸಿ ಹೋಗುತ್ತವೆ ಎಂದರಲ್ಲದೆ ಕಂಡದ್ದನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದಕ್ಕೆ ಅತ್ಯುತ್ತಮ ಭಾಷೆ ಅಗತ್ಯ ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಬೆಳ್ಳಾರೆಯ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಅಂಕಣಕಾರ ಡಾ.ನರೇಂದ್ರ ರೈ ದೇರ್ಲ ನುಡಿಚಿತ್ರದ ಭಾಷೆ ಎಂಬ ವಿಷಯದ ಬಗೆಗೆ ಮಾತನಾಡಿ ನುಡಿಚಿತ್ರಕ್ಕೆ ಕಾವ್ಯದ ಲಹರಿ ಬೇಕು. ಪತ್ರಕರ್ತನಲ್ಲಿ ಸಂವೇದನೆಗಳು ಜಾಗೃತಗೊಳ್ಳಬೇಕು. ಆಯ್ದುಕೊಳ್ಳುವ ವಸ್ತುವಿನ ಬಗೆಗೆ ಕುಶಲಿಗಳಾಗಬೇಕು. ಇಂದು ಉಗುರಿಗೆ ಹಚ್ಚುವ ಬಣ್ಣ ನುಡಿಚಿತ್ರಕ್ಕೆ ವಸ್ತುವಾಗುತ್ತಿದೆ. ಇಂತಹ ನುಡಿಚಿತ್ರಗಳು ಬೇಕೇ ಎಂದು ಬರಹಗಾರ ಪ್ರಶ್ನಿಸಿಕೊಳ್ಳಬೇಕು ಎಂದರು.
ಅಕ್ಷರ, ಅರಿವು, ಭಾಷೆ, ಲೋಕದ ಮಂದಿಯೊಂದಿಗಿನ ಸಂಪರ್ಕ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದರೆ ಆಧುನಿಕ ಪದವಿಗಳು ನಮ್ಮನ್ನು ದೂರ ಮಾಡುತ್ತಿವೆ. ಭಾವಾನಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಹಳ್ಳಿಯಲ್ಲಿನ ಸಂವೇದನೆ ನಗರಗಳಲ್ಲಿ ಕಾಣಿಸುವುದಿಲ್ಲ. ಆದರೆ ಗ್ರಾಮೀಣ ಭಾರತವೂ ತನ್ನ ಮೂಲ ಸ್ವರೂಪದಿಂದ ಆಧುನಿಕತೆಯೆಡೆಗೆ ಹೊರಳುತ್ತಾ ಮುಗ್ಧತೆಯನ್ನು ಕಳಕೊಳ್ಳುತ್ತಿದೆ ಎಂದರಲ್ಲದೆ ಗದ್ದಲದ ನಡುವೆಯೂ ಸಂತನಾಗುವ ಸಾಮರ್ಥ್ಯ ಬಂದಾಗ ಉತ್ತಮ ಪತ್ರಕರ್ತನ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬರಹಗಾರನಿಗೆ ನೈಪುಣ್ಯತೆ ಬೇಕು. ಅದನ್ನು ಸಾಧಿಸುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಬರವಣಿಗೆ ಮನುಷ್ಯನ ಬೆಳವಣಿಗೆಗೆ ಸಹಕಾರಿ ಎಂದರು. ವೇದಿಕೆಯಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾಥಿನಿ ಪ್ರಥಮ ಉಪಾಧ್ಯಾಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ಥಾವನೆಗೈದು ಸ್ವಾಗತಿಸಿದರು. ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ವಂದಿಸಿದರು.