ಉಪನಾಸಕರಿಗೆ ವಿಷಯ ಪರಿಣತಿ ಅಗತ್ಯ: ಡಾ.ವರ್ಮುಡಿ
ಪುತ್ತೂರು: ಉಪನ್ಯಾಸಕರುಗಳು ವರ್ಷಕ್ಕೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಬವಿಷ್ಯದ ದಿನಗಳಿಗೆ ಪೂರಕ. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ನಮ್ಮ ನಮ್ಮ ವಿಷಯಗಳಲ್ಲಿ ಸಾಕಷ್ಟು ಪರಿಣತಿಯನ್ನು ಪಡೆದುಕೊಳ್ಳುವುದು. ವಿಷಯದ ಮೇಲಿನ ಹತೋಟಿಯನ್ನು ಉಪನ್ಯಾಸಕರು ಕಳೆದುಕೊಂಡರೆ ತರಗತಿಯನ್ನು ಸಸೂತ್ರವಾಗಿ ನಡೆಸುವುದಕ್ಕೆ ಕಷ್ಟ ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯುವ ಪ್ರಶಿಕ್ಷಣ ಘಟಕವು ವಿವೇಕಾನಂದ ಕಾಲೇಜಿನಲ್ಲಿ ಶನಿವಾರ ಉಪನ್ಯಾಸಕರುಗಳಿಗಾಗಿ ಆಯೋಜಿಸಿದ ಒಂದು ದಿನದ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿದಿನವೂ ತರಗತಿಯಲ್ಲಿ ಸಾಕಷ್ಟು ಉದಾಹರಣೆಗಳನ್ನು ನೀಡುವುದರ ಮೂಲಕ ಪಾಠ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನಮ್ಮ ಗುಣಮಟ್ಟವು ವಿದ್ಯಾರ್ಥಿಗಳಿಗೆ ಎಷ್ಟರಮಟ್ಟಿಗೆ ನಾವು ಅರ್ತ ಮಾಡಿಸುತ್ತೇವೆ ಅನ್ನುವುದನ್ನು ಆಧರಿಸಿದೆ. ಈ ಹಿನ್ನೆಲೆಯಲ್ಲಿ ಸ್ವ-ಸಾಮರ್ಥ್ಯವನ್ನು ಅರಿಯುವ ಕಾರ್ಯದ ಜರೂರತ್ತಿದೆ. ಅದಕ್ಕಾಗಿ ವಿವಿಧ ಕಾರ್ಯಾಗಾರಗಳು, ಪ್ರಬಂಧ ಮಂಡನೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದರು.
ಮುಂದಿನ ದಿನಗಳಲ್ಲಿ ಉಪನ್ಯಾಸಕರುಗಳಿಗೆ ಮತ್ತಷ್ಟು ಹೆಚ್ಚಿನ ಸವಾಲುಗಳು ಜವಾಬ್ಧಾರಿಗಳು ಎದುರಾಗುವ ಸಂಭವವಿದೆ. ಹೀಗಾಗಿ ಸಂಶೋಧನೆಯತ್ತ ಉಪನ್ಯಾಸಕರುಗಳು ಮನಮಾಡಬೇಕು. ಗುಣಮಟ್ಟವನ್ನು ವೃದ್ಧಿಸುವ ಕಾಯಕಕ್ಕೆ ಪ್ರತಿಯೊಬ್ಬರೂ ತಯಾರಾಗಬೇಕು ಎಂದರಲ್ಲದೆ ಉಪನ್ಯಾಸಕರಿಗೆ ಯಾವತ್ತೂ ಅಹಂ ಬರಬಾರದು. ನಾವೆಷ್ಟೇ ಉತ್ತಮವಾಗಿದ್ದರೂ ಮತ್ತಷ್ಟು ಕಲಿಯುವ ಹಂಬಲವಿರಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟ್ರಮಣ ಭಟ್, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್, ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾಯ್ಕ್ರಮ ನಿರ್ವಹಿಸಿದರು.