ವಿವೇಕಾನಂದ ಕಾಲೇಜಿನಲ್ಲಿ ಸಂಶೋಧನಾ ಕಾರ್ಯಾಗಾರ ಉದ್ಘಾಟನೆ – ಉತ್ತರಗಳನ್ನು ಪ್ರಶ್ನಿಸುವುದೇ ಆಧುನಿಕ ಜಗತ್ತಿನ ಸಂಶೋಧನೆ: ಡಾ.ಎಡಪಡಿತ್ತಾಯ
ಪುತ್ತೂರು: ಆಧುನಿಕ ಜಗತ್ತಿನ ಸಂಶೋಧನೆಯ ಅರ್ಥ ಬದಲಾಗಿದೆ. ಹಿಂದಿನ ಕಾಲದಲ್ಲಿ ನಿಗದಿತ ಪ್ರಶ್ನೆಗಳಿಗೆ ಉತ್ತರಿಸುವುದು ಸಂಶೋಧನೆಯಾಗಿದ್ದರೆ, ಇಂದು ನಮ್ಮೆದುರಿಗಿರುವ ಸಿದ್ಧ ಉತ್ತರಗಳನ್ನು ಪ್ರಶ್ನಿಸುವುದು ಸಂಶೋಧನೆಯೆನಿಸಿಕೊಳ್ಳುತ್ತಿದೆ. ಅಲ್ಲದೆ ಸಂಶೋಧನೆ ಎಂಬುದು ವಿಜ್ಞಾನ, ಸಂಖ್ಯಾಶಾಸ್ತ್ರಗಳೇ ಮೊದಲಾದ ವಿವಿಧ ಶಿಸ್ತುಗಳನ್ನೊಳಗೊಂಡ ಪ್ರಕ್ರಿಯೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಪಿ.ಎಸ್.ಎಡಪಡಿತ್ತಾಯ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಒಕ್ಕೂಟ, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ನಡೆದ ಒಂದು ದಿನದ ಸಂಶೋಧನಾ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ದೇಶದಲ್ಲಿ ವಾರ್ಷಿಕವಾಗಿ ಸುಮಾರು ನಾಲ್ಕು ಲಕ್ಷಕ್ಕಿಂತಲೂ ಅಧಿಕ ಮಂದಿ ಡಾಕ್ಟರೇಟ್ ಪದವಿಗಳನ್ನು ಪಡೆಯುತ್ತಿದ್ದಾರೆ. ಆದರೆ ಆ ಸಂಶೋಧನೆಗಳೆಲ್ಲಾ ಸಮಾಜಕ್ಕೆ ದೇಶಕ್ಕೆ ಕೊಡುಗೆಯೆನಿಸುತ್ತಿವೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಹಾಗಾಗಿ ಇತರರಿಗೆ ಸಹಕಾರಿಯೆನಿಸುವ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಿದೆ. ಸಂಶೋಧನೆಗಳು ಸತ್ಯವನ್ನು ಸ್ಥಾಪಿಸುವ ಕ್ರಿಯೆಯಾಗಬೇಕು. ಆಗ ಮಾತ್ರ ಅದು ಪರಿಣಾಮಕಾರಿಯೆನಿಸಲು ಸಾಧ್ಯ ಎಂದರು.
ಪಿಎಚ್ಡಿ ಗಳಿಸಿದಾಕ್ಷಣ ಸಂಶೋಧನೆ ಪೂರ್ಣಗೊಂಡಿತೆಂದು ಭಾವಿಸಿದರೆ ಅದು ತಪ್ಪು. ನಿಜವಾದ ಸಂಶೋಧನೆ ಶುರುವಾಗುವುದೇ ಪಿ.ಎಚ್.ಡಿ ಗಳಿಸಿದ ನಂತರ. ಪಿ.ಎಚ್.ಡಿ ವಿಷಯವನ್ನು ಅರಿಯುವ, ಹೊಸ ಸಂಗತಿಗಳೆಡೆಗೆ ಬೆಳಕು ಚೆಲ್ಲವ ಅಗತ್ಯ ಹಾಗೂ ಕ್ರಮಗಳನ್ನು ಸಂಶೋಧಕನಿಗೆ ತಿಳಿಸಿಕೊಡುತ್ತದೆ. ಭವಿಷ್ಯದಲ್ಲಿ ಉತ್ತಮ ಸಂಶೋಧನೆ ಕೈಗೊಳ್ಳುವುದಕ್ಕೆ ಪಿ.ಎಚ್.ಡಿ ಅಧ್ಯಯನ ದಾರಿ ತೋರಿಸಿಕೊಡುತ್ತದೆ. ಸಂಶೋಧನೆಗೆ ಇಳಿಯುವವರು ಸುಲಭ ವಿಚಾರಗಳನ್ನು ಆಯ್ದುಕೊಳ್ಳುವುದರ ಮೂಲಕ ಪಿ.ಎಚ್.ಡಿ ಗಳಿಸುವುದನ್ನಷ್ಟೇ ಗುರಿಯಾಗಿರಿಸಿಕೊಳ್ಳಬಾರದು ಬದಲಾಗಿ ಕಷ್ಟವಾದರೂ ಮೌಲ್ಯಯುತ ಸಂಶೋಧನೆಗೆ ಅಣಿಯಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ.ರಾಮ ಭಟ್ ಮಾತನಾಡಿ. ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಗಮನ ಭಾರತದ ಮೇಲಿದೆ. ಹಾಗಾಗಿ ಕೇವಲ ನಮ್ಮ ರಾಷ್ಟ್ರಕ್ಕಲ್ಲದೆ ವಿಶ್ವಕ್ಕೇ ಕೊಡುಗೆ ನೀಡಬೇಕಾದ ಹೊಣೆ ನಮ್ಮ ಮೇಲಿದೆ. ಎಫ್.ಡಿ.ಐ ಯಂತಹ ಆರ್ಥಿಕ ನೀತಿಯ ಬಗೆಗೆ ವ್ಯಾಪಕ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಸಂಶೋಧನೆಗಳ ಮೂಲಕ, ಕಾರ್ಯಾಗಾರಗಳ ಮೂಲಕ ನೀತಿ ನಿರ್ಮಾಪಕರಿಗೆ ಸಲಹೆ ಸೂಚನೆಗಳನ್ನು ಕೊಡಬೇಕಾಗಿದೆ. ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಸೂಚಿಸಬೇಕಿದೆ ಎಂದು ನಉಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಸಮಾಜಮುಖಿ ಸಂಶೋಧನೆಗಳು ಹೆಚ್ಚಾದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ವಿವೇಕಾನಂದ ಸಂಶೋಧನಾ ಕೇಂದ್ರದ ಮೂಲಕ ಉತ್ತಮ ಸಂಶೋಧನೆಗೆ ಅವಕಾಶ ಮಾಡಿ ಕೊಡುವುದು ಕೇಂಧ್ರದ ಆಶಯವಾಗಿದೆ. ಪದವಿ ಕಾಲೇಜುಗಳಲ್ಲಿರುವ ಪ್ರಾಧ್ಯಾಪಕರನ್ನೂ ಪಿ.ಎಚ್.ಡಿ ಮಾರ್ಗದರ್ಶಕರಾಗಲು ವಿಶ್ವವಿದ್ಯಾನಿಲಯ ಅವಕಾಶ ನೀಡಬೇಕು ಎಂದು ನುಡಿದರು.
ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ವಿವೇಕಾನಂದ ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿ.ವಿ.ಭಟ್ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಉಪಸ್ಥಿತರಿದ್ದರು.
ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಹಾಗೂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಶಶಿಧರ್ ಆಶಯ ಗೀತೆ ಹಾಡಿದರು. ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಎನ್ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ವಿ ಕಾರ್ಯಕ್ರಮ ನಿರ್ವಹಿಸಿದರು.