ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಅಪ್ರಸ್ತುತರಾಗುವ ಸಾಧ್ಯತೆಯಿದೆ : ಎಸ್.ಆರ್.ರಂಗಮೂರ್ತಿ
ಪುತ್ತೂರು: ಕ್ಷಣ ಕ್ಷಣಕ್ಕೂ ದೇಶ ಬದಲಾವಣೆಗೆ ತನ್ನನ್ನು ತಾನು ಒಗ್ಗಿಕೊಳ್ಳುತ್ತಿದೆ. ಆ ಸಂದರ್ಭದಲ್ಲಿ ನಾವೂ ಅದರೊಂದಿಗೆ ಸಾಗಬೇಕಾದ್ದು ಅನಿವಾರ್ಯ. ಇಲ್ಲದಿದ್ದಲ್ಲಿ ನಾವು ಆಧುನಿಕ ಜಗತ್ತಿನಲ್ಲಿ ಅಪ್ರಸ್ತುತರಾಗಿಬಿಡುತ್ತೇವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ತನ್ನ ವಿವಿಧ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರಿಗಾಗಿ ಶನಿವಾರ ಆಯೋಜಿಸಿದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದುಕುವುದಷ್ಟೇ ಮನುಷ್ಯನಿಗೆ ಮುಖ್ಯವಾಗಬಾರದು. ಬದಲಿಗೆ ಸರಿಯಾದ ಜೀವನ ಶೈಲಿಯನ್ನು ಹೊಂದಿದ್ದೇವೆಯೇ? ಚಿಂತನೆಗಳು ಸ್ಪಷ್ಟವಾಗಿವೆಯೇ? ಆಲೋಚನೆಗಳು ದೇಶದ ಪರವಾಗಿವೆಯೇ ಎಂಬುದು ಅತ್ಯಂತ ಅಗತ್ಯ. ರಾಷ್ಟ್ರೀಯ ಚಿಂತನೆಯನ್ನು ಒಡಮೂಡಿಸಿಕೊಂಡು ಬೆಳೆಯಬೇಕಾದ್ದು ಇಂದಿನ ಅಗತ್ಯ. ದೇಶಭಕ್ತಿ ಇಲ್ಲದೆ ಯಾವ ಸಾಧನೆ ಮಾಡಿದರೂ ಅದು ನಿಷ್ಪ್ರಯೋಜಕ ಎಂದು ಹೇಳಿದರು.
ಸ್ವಚ್ಛ ಭಾರತವೆಂದರೆ ಕೇವಲ ಕಸ ಕಡ್ಡಿಗಳ ನಿರ್ಮೂಲನೆಯಷ್ಟೇ ಅಲ್ಲ. ಬದಲಾಗಿ ಬೌದ್ಧಿಕ, ಮಾನಸಿಕ ಸ್ವಚ್ಚತೆಯೂ ಹೌದು. ಇಂದು ದೇಶದ ಮೇಲೆ ದಾಳಿ ನಡೆಸಿದವರ ಪರವಾಗಿ ಘೋಷಣೆ ಕೂಗುವಷ್ಟರ ಮಟ್ಟಿಗೆ ಬೌದ್ಧಿಕ ಹಾಗೂ ಮಾನಸಿಕ ದಿವಾಳಿಯಾದದ್ದು ಕಾಣುವಾಗ ಆತಂಕವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಆಲೋಚಿಸುವಂತಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ, ಕೋಶಾಧಿಕಾರಿ ರವೀಂದ್ರ ಪಿ, ಸಂಪನ್ಮೂಲ ವ್ಯಕ್ತಿಗಳಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪ್ರಕಾಶ್ ಹಾಗೂ ಡಾ.ಸುಬ್ಬಣ್ಣ ಭಟ್ ಉಪಸ್ಥಿತರಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪರಮೇಶ್ವರ ಶರ್ಮ ವಂದಿಸಿದರು. ಎಂ.ಕಾಂ ವಿಭಾಗ ಮುಖ್ಯಸ್ಥೆ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.