ವಿವೇಕಾನಂದದಲ್ಲಿ ಯಕ್ಷಗಾನ ನಾಟ್ಯ ತರಬೇತಿ ತರಗತಿಗಳ ಉದ್ಘಾಟನೆ
ಪುತ್ತೂರು: ಯಕ್ಷಗಾನವನ್ನು ಶೈಕ್ಷಣಿಕ ಪರಿಸರದಲ್ಲಿ ಕಲಿಸುವುದು ಅತ್ಯಂತ ಸ್ವಾಗತಾರ್ಹ ವಿಚಾರ. ವಿವೇಕಾನಂದ ಕಾಲೇಜಿನಲ್ಲಿ ಯಕ್ಷರಂಜಿನಿ ಯಕ್ಷಕಲಾ ಸಂಘ ಸಾಕಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿಗೆ ಂಆತ್ರ ಸೀಮಿತವಾಗದೆ ನಾನಾ ಕಡೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದು ನಿಜಕ್ಕೂ ಮೆಚ್ಚುವಂತಹ ವಿಚಾರ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಹೇಳಿದರು.
ಅವರು ಕಾಲೇಜಿನ ಯಕ್ಷರಂಜಿನಿ ಯಕ್ಷಗಾನ ಕಲಾ ಸಂಘದ ನಾಟ್ಯ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಕಲಾವಿದರು ಕುಣಿಯುವಾಗ ಮನಸ್ಸಿಗೆ ಅತೀವ ನೋವಾಗುತ್ತದೆ. ಯಕ್ಷಗಾನವನ್ನು ಹೀಗೂ ಹಾಳುಗೆಡವುತ್ತಾರಲ್ಲಾ ಎಂಬ ಭಾವನೆ ಮೂಡುತ್ತದೆ. ಯಕ್ಷಗಾನವನ್ನು ಪ್ರೀತಿಸುವ ಮತ್ತು ಗೌರವಿಸುವ ಮಂದಿ ಅದರ ಪರಿಧಿಯನ್ನು ಬಿಟ್ಟು ವ್ಯವಹರಿಸಬಾರದು. ಶಾಸ್ತ್ರೀಯ ನೆಲೆಗಟ್ಟಿನಿಂದ ಅಧ್ಯಯನ ಮಾಡಿದಾಗ ಮಾತ್ರ ಅತ್ಯುತ್ತಮ ಕಲಾವಿದನೊಬ್ಬ ಉದಯಿಸಿಕೊಳ್ಳಬಲ್ಲ ಎಂದು ನುಡಿದರು.
ಯಕ್ಷಗಾನ ನಾಟ್ಯ ತರಬೇತಿಯ ಗುರು, ಪೆರ್ಲದ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ನಿರ್ದೇಶಕ ಸಬ್ಬಣಕೋಡಿ ರಾಮ ಭಟ್ ಮಾತನಾಡಿ ಶಾಶ್ತ್ರೀಯತೆಯನ್ನು ಬಿಟ್ಟು ಯಕ್ಷಗಾನವನ್ನು ಅಭ್ಯಸಿಸಬಾರದು. ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ, ಗೌರವಗಳಿಗೆ. ಅದಕ್ಕೆ ಅಪಚಾರವಾಗುವ ರೀತಿಯಲ್ಲಿ ವ್ಯವಹರಿಸಬಾರದು ಎಂದರು.
ಯಕ್ಷರಂಜಿನಿಯ ಸಂಚಾಲಕ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ತಂಡದ ಸದಸ್ಯ ವರುಣ್ ಕೆ.ಪಿ ವಂದಿಸಿದರು. ನಂತರ ಸುಮಾರು ೨೧ ಜನರ ತಂಡಕ್ಕೆ ನಾಟ್ಯಾಭ್ಯಾಸವನ್ನು ಆರಮಭಿಸಲಾಯಿತು.