ವಿವೇಕಾನಂದ ಯಶಸ್ ಸಂಸ್ಥೆಯಿಂದ ನಾಗರಿಕ ಸೇವೆ ಬಗೆಗೆ ಕಾರ್ಯಾಗಾರ – ಭಾರತೀಯ ದೃಷ್ಟಿಕೋನ ಇರುವ ಅಧಿಕಾರಿಗಳು ಬೇಕು : ಶೋಭಾ ಕರಂದ್ಲಾಜೆ
ಪುತ್ತೂರು: ರಾಜ್ಯದ, ರಾಷ್ಟ್ರದ ಪ್ರಮುಖ ನಿರ್ಧಾರಗಳು ಐಎಎಸ್ ಅಧಿಕಾರಿಗಳನ್ನು ಅವಲಂಭಿಸಿವೆ. ಆದ್ದರಿಂದ ಅಂತಹ ಆಯಕಟ್ಟಿನ ಜಾಗದಲ್ಲಿರುವವರು ನಮ್ಮ ದೇಶದ ಬಗೆಗೆ, ನಮ್ಮತನದ ಬಗೆಗೆ ಆಲೋಚಿಸುವಂತಹವರಾಗಿರಬೇಕು. ಆಗ ಮಾತ್ರ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ರಾಜಕಾರಣಿಗಳು ಮಂತ್ರಿಗಳಾಗುತ್ತಾರಾದರೂ ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಮುನ್ನಡೆಸುವವರು ಐಎಎಸ್ ಅಧಿಕಾರಿಗಳು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಯಶಸ್ ಸಂಸ್ಥೆಯು ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಹಯೋಗದಲ್ಲಿ ವಿವಿಧ ಸಂಸ್ಥೆಗಳ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಭಾರತೀಯ ನಾಗರಿಕ ಸೇವೆಗಳ ಮಹತ್ವ ಮತ್ತು ಅವಕಾಶಗಳ ಬಗೆಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದು. ಪ್ರಾಮಾಣಿಕ ಅಧಿಕಾರಿಗಳಿದ್ದಾಗ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗುತ್ತವೆ. ರಾಜಕಾರಣಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳ ಬೆಂಬಲ ಅಗತ್ಯ. ಅಧಿಕಾರಿಗಳಿಗೆ ನಿರ್ದಿಷ್ಟ ದೃಷ್ಟಿ ಇಲ್ಲದಿದ್ದಾಗ ಮಾಡುವ ಕೆಲಸದಲ್ಲಿ ದರ್ಪ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ತಮ್ಮ ಬಳಿಗೆ ಬರುವ ಜನ ಹಾಗೂ ಕೈಕೆಳಗೆ ಕೆಲಸ ಮಾಡುವ ಮಂದಿಯನ್ನು ಗುಲಾಮರಂತೆ ಕಾಣುವ ಮನಸ್ಥಿತಿ ರೂಪುಗೊಳ್ಳುತ್ತದೆ. ಎಲ್ಲಿಯವರೆಗೆ ಅಧಿಕಾರಿ ವರ್ಗದಲ್ಲಿ ಭಾರತೀಯತೆಯನ್ನು ತುಂಬುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಮುಂದುವರಿಯುತ್ತದೆ ಎಂದರು.
ಪ್ರಜ್ಞಾವಂತರು ನಮ್ಮ ದೇಶದ ಬಗೆಗೆ ಅನೇಕ ಚಿಂತನೆಗಳನ್ನು ನಡೆಸುತ್ತಿದ್ದಾರೆ. ದೇಶವನ್ನು ಪ್ರಾಪಂಚಿಕವಾಗಿ ಪ್ರಸ್ತುತ ಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಜ್ಜನರಾಗಿರುವ ಹಾಗೂ ಸೇವೆಯಲ್ಲಿ ಆಸಕ್ತರಾಗಿರುವ ನಾಗರಿಕ ಸೇವಾ ಅಧಿಕಾರಿಗಳನ್ನು ರೂಪಿಸಬೇಕಾಗಿದೆ. ಕೆಲಸ ಕಾರ್ಯದಲ್ಲಿ ನಮ್ಮತನ ಒಡಮೂಡಿದಾಗ ಮಾತ್ರ ಅಪೇಕ್ಷಿತ ಆಡಳಿತಶಾಹಿ ನಿರ್ಮಾಣಗೊಳ್ಳಲು ಸಾಧ್ಯ. ಕೆಲವು ಅಧಿಕಾರಿಗಳ ವ್ಯವಹಾರ ಕಾಣುವಾರ ಇಂಥವರಿಂದ ಯಾವ ಉತ್ತಮ ಕೆಲಸವನ್ನೂ ಮಾಡಿಸಲು ಅಸಾಧ್ಯ ಎಂಬ ಭಾವನೆ ಬರುವುದಿದೆ ಎಂದರು.
ಈ ಹಿಂದೆ ಐಎಎಸ್ ಉತ್ತೀರ್ಣರಾದವರು ದೇಶದ ಇತರ ಭಾಗಗಳಲ್ಲೇ ಕೆಲಸ ಮಾಡಬೇಕಿತ್ತು. ಆದರೆ ಪ್ರಾದೇಶಿಕ ಜ್ಞಾನ ಇರುವವರೇ ಅಧಿಕಾರಿಗಳಾಗಬೇಕೆಂಬ ಉದ್ದೇಶದಿಂದ ಈಗ ಆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಮೂರು ಐಎಎಸ್ ಹುದ್ದೆ ಖಾಲಿ ಇದ್ದರೆ ಒಂದು ಹುದ್ದೆಗೆ ಕರ್ನಾಟಕದವರನ್ನೇ ಆಯ್ಕೆ ಮಾಡಲಾಗುತ್ತದೆ. ಉಳಿದ ಇಬ್ಬರನ್ನು ನಮ್ಮ ನೆರೆ ರಾಜ್ಯಗಳಲ್ಲೇ ನಿಯೋಜಿಸಲಾಗುತ್ತದೆ. ಈ ತೆರನಾದ ಪ್ರಾದೇಶಿಕ ಆದ್ಯತೆ ಮುಂದಿನ ದಿನಗಳಲ್ಲಿ ಪರಿಣಾಮ ತರಲಿದೆ ಎಂದರಲ್ಲದೆ ಐಎಎಸ್ ಅಧಿಕಾರಿ ವರ್ಗದಲ್ಲಿ ಕರ್ನಾಟಕದ ಮಂದಿ ಸಾಕಷ್ಟು ಕಮ್ಮಿಯಿದ್ದಾರೆ. ಹೀಗಾಗಿ ನಮ್ಮಲ್ಲಿ ರಾಜ್ಯದ ಬಗೆಗೆ ಸೂಕ್ತ ಆಲೋಚನೆ, ಜನಸ್ನೇಹಿ ವಿಚಾರಧಾರೆಗಳು ಕಡಿಮೆಯಾಗುತ್ತಿವೆ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಾವಿರ ಮೈಲಿಯ ಕ್ರಮಿಸುವಿಕೆ ಮೊದಲ ಹೆಜ್ಜೆಯಿಂದ ಆರಂಭಗೊಳ್ಳುತ್ತದೆ. ಅಂತೆಯೇ ವಿದ್ಯಾರ್ಥಿಗಳು ಅಸಾಧ್ಯ ಎಂಬ ಮನೋಭಾವವನ್ನು ತೊಡೆದುಹಾಕಿ ನಾಗರಿಕ ಸೇವಾ ಕ್ಷೇತ್ರಕ್ಕೆ ಅಡಿಯಿಡಬೇಕು. ಸ್ಪಷ್ಟ ಗುರಿಯೊಂದಿಗೆ ವ್ಯಕ್ತಿತ್ವನ್ನು ರೂಪುಗೊಳಿಸಿದಾಗ ಸಂಕಲ್ಪ ಸಾಕಾರಗೊಳ್ಳುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಕಳೆದ ಅರವತ್ತು ವರ್ಷಗಳಲ್ಲಿ ಡೋಂಗಿ ಜಾತ್ಯಾತೀತವಾದಿಗಳಿಂದ ರಾಷ್ಟ್ರ ಮುನ್ನಡೆದುದರ ಪರಿಣಾಮ ನಿರೀಕ್ಷಿತ ಮಟ್ಟವನ್ನು ಭಾರತ ತಲುಪಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ದೃಷ್ಟಿಕೋನ ಹೊಂದಿದ ಅಧಿಕಾರಿಗಳು ಹೊರಬಂದಾಗ ದೇಶ ಜಗತ್ತಿನ ಶ್ರೇಷ್ಟ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ. ಐರರ್ಲೆಂಡ್ ರಾಷ್ಟ್ರದಲ್ಲಿ ಮದುವೆಯಾದ ಹೊಸದರಲ್ಲಿ ದಂಪತಿಗಳು ಸ್ಮಶಾನಕ್ಕೆ ತೆರಳಿ ದೇಶಕ್ಕಾಗಿ ಮರಣಿಸಿದವರ ಬಗೆಗೆ ಅರಿತು ಬರುವ ಪದ್ಧತಿ ಇದೆ. ಹೀಗೆ ದೇಶದ ಬಗೆಗೆ ಯೋಚಿಸುವ ಕಾರ್ಯ ನಡೆಯಬೇಕು ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ನ್ಯಾಶನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಕುಲಸಚಿವ ಪ್ರೊ.ಮೌಲೇಶ್ ಉಪಸ್ಥಿತರಿದ್ದರು. ಯಶಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಯಶಸ್ ಸಂಸ್ಥೆಯ ಸಂಯೋಜಕ ಗೋವಿಂದರಾಜ ಶರ್ಮ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಬಂಗಾರಡ್ಕ ವಿಶ್ವೇಶ್ವರ ಭಟ್ ಪ್ರಸ್ಥಾವನೆಗೈದರು. ಯಶಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಸೂರ್ಯನಾರಾಯಣ ಕೆ ವಂದಿಸಿದರು. ಕಾಲೇಜಿನ ಎಂ.ಕಾಂ ವಿಭಾಗ ಮುಖ್ಯಸ್ಥೆ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ನಂತರ ಪ್ರೊ.ಮೌಲೇಶ್ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು.