ಯೋಗ ಮನಸ್ಸು ಮತ್ತು ದೇಹವನ್ನು ಬೆಸೆಯುವ ಒಂದು ಸಾಧನ: ಡಾ. ಗೌರಿ
ಪುತ್ತೂರು: ಯೋಗವೆಂಬ ಪದದ ಮೂಲ ಸಂಸ್ಕೃತದ ಯೂಚ್. ಅಂದರೆ ಜೋಡಣೆ ಎಂದರ್ಥ. ಮನಸ್ಸು ಮತ್ತು ದೇಹಗಳ ಪರಸ್ಪರ ಜೋಡಿಸುವಿಕೆ ಯೋಗದಿಂದ ಸಾಧ್ಯ. ಯೋಗ ಕಲಿಯಲು ವಯಸ್ಸಿಗಿಂತ ಮನಸ್ಸು ಮುಖ್ಯ. ಒತ್ತಡ ನಿವಾರಣೆಗೆ ಯೋಗ ಒಂದು ಉತ್ತಮ ಔಷಧವಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿದ್ಯಾಲಯದ ವೈದ್ಯೆ ಡಾ. ಗೌರಿ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ವತಿಯಿಂದ ಆಯೋಜಿಸಲಾದ ೩ನೇ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಯೋಗ ಅಷ್ಟಾಂಗ ಯೋಗಗಳಾಗಿ ವಿಭಾಗಿಸಲ್ಪಟ್ಟಿದೆ. ಸಮಾಧಿ ಸ್ಥಿತಿ ಪಡೆಯಲು ಯಮದಿಂದಲೇ ಆರಂಭಿಸಬೇಕು. ಯೋಗ ವಿಸ್ತಾರವಾದ ಒಂದು ವಿಷಯ. ಪ್ರತಿ ಯೋಗಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ಯೋಗ ಹಲವು ರೋಗಗಳಿಗೆ ಪರಿಹಾರವಾಗಿದೆ. ಬಿಪಿ, ಸಿಹಿಮೂತ್ರದಂತಹ ರೋಗಗಳನ್ನು ನಿರಂತರ ಯೋಗಾಭ್ಯಾಸದ ಮೂಲಕ ನಿಯಂತ್ರಣದಲ್ಲಿರಿಸಿಕೊಳ್ಳಬಹುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ದೇಹಕ್ಕೆ ಮನಸ್ಸಿನೊಡನೆ ಸಂಬಂಧ ಕಡಿದು ಹೋದಾಗ ಒಂದಲ್ಲ ಒಂದು ಸಮಸ್ಯೆಗಳು ಆರಂಭವಾಗುತ್ತದೆ. ಯುವಕರಲ್ಲಿ ಹೆಚ್ಚಾಗುತ್ತಿರುವ ಏಕಾಗ್ರತೆಯ ಕೊರತೆಗೆ ಇದೂ ಒಂದು ಕಾರಣ. ದೇಹಕ್ಕೆ ಬೇಕಾದುದು ಕೊಡದಿದ್ದಾಗ ಮನಸ್ಸಿಗೆ ಬೇಕಾಗುವುದೂ ಸಿಗುವುದಿಲ್ಲ. ಆರೋಗ್ಯಕರ ದೇಹ ಹೊಂದಲು ಯೋಗ ಅಗತ್ಯ. ಈ ಯೋಗ ಬದುಕಿಗೊಂದು ಯೋಗ ಕೊಡುತ್ತದೆ. ಯೋಗದಲ್ಲಿ ತೊಡಗಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಬಳಸಿಕೊಳ್ಳುವುದು ಮುಖ್ಯ ಎಂದು ನುಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮಾನಸಿಕ ಹಾಗೂ ದೈಹಿಕ ಧೃಢತೆ ಪಡೆಯಲು ಯೋಗ ಸಹಾಯಕ. ಮೋಕ್ಷ ಪಡೆಯಲು ಭಕ್ತಿ, ಜ್ಞಾನ ಹಾಗೂ ಕರ್ಮ ಮಾರ್ಗಗಳಂತೆ ಯೋಗವೂ ಒಂದು ಮಾರ್ಗ. ಅದು ಉತ್ಸಾಹ ತುಂಬುವುದರೊಂದಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಚೈತನ್ಯ ನೀಡುತ್ತದೆ, ಅಲ್ಲದೇ ಉತ್ತಮ ಗುಣ ಬೆಳೆಸಿಕೊಳ್ಳಲು, ಮನಸ್ಸನ್ನು ಕೇಂದ್ರೀಕರಣ ಪಡೆಯಲು ಯೋಗ ಒಂದು ಸಾಧನ. ಯೋಗ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ದಿನಚರಿಯ ಒಂದು ಭಾಗವಾಗಬೇಕು. ಎಂದರು.
ವಿದ್ಯಾರ್ಥಿನಿಯರಾದ ಯಶಸ್ವಿ ಹಾಗೂ ನಾಗವೇಣಿ ಪ್ರಾರ್ಥಿಸಿದರು. ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ಸಂಚಾಲಕ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಈಶ್ವರ್ ಪ್ರಸಾದ್ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಅನಿತಾ ಕಾಮತ್ ವಂದಿಸಿದರು. ಕನ್ನಡ ಉಪನ್ಯಾಸಕ ಡಾ. ರೋಹಿಣಾಕ್ಷ ನಿರೂಪಿಸಿದರು.