‘ಜೀವಾತ್ಮವನ್ನು ಪರಮಾತ್ಮನೊಂದಿಗೆ ಬೆಸೆಯಬಲ್ಲ ಸಾಧನ ಯೋಗ’
ಪುತ್ತೂರು: ಯೋಗ ಯಾವತ್ತಿಗೂ ಅರ್ಥ ಕಳೆದುಕೊಳ್ಳುವುದಿಲ್ಲ. ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು, ನೈತಿಕತೆಯನ್ನು ಬೆಳೆಸುವುದು ಮಾತ್ರವಲ್ಲದೆ ಚಂಚಲ ಮನಸ್ಸನ್ನು ಪ್ರಯತ್ನ ಪೂರ್ವಕವಾಗಿ ಒಂದೆಡೆ ಹಿಡಿದಿಡಬಲ್ಲ ಪ್ರಮುಖ ಸಾಧನವೇ ಯೋಗ. ಈ ಪ್ರಕಿಯೆಗೆ ಮನಸ್ಸನ್ನು ಒಳಪಡಿಸಿದಾಗ ಅದು ಮುಂದೆ ತಾನಾಗಿಯೇ ನಿಯಂತ್ರಿತವಾಗುತ್ತದೆ ಎಂದು ಪುತ್ತೂರಿನ ಓಂಕಾರ ಯೋಗ ಕೇಂದ್ರದ ಸಂಚಾಲಕ ಕರುಣಾಕರ ಉಪಾಧ್ಯಾಯ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯವು ’ವಿಶ್ವ ಯೋಗ ದಿನಾಚರಣೆ’ಯ ಅಂಗವಾಗಿ ಆಯೋಜಿಸಿದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ತನ್ನ ತನದ ಅಧ್ಯಯನಕ್ಕೆ ಮತ್ತು ತನ್ನ ಮನಸ್ಸಿಗೆ ಶಕ್ತಿ ನೀಡಬಲ್ಲ ವಿವಿಧ ಮುಖಗಳನ್ನು ಯೋಗದ ಸಹಾಯದಿಂದ ಗುರುತಿಸಬಹುದು. ಅಹಿಂಸೆ ಎಂದರೆ ಹಿಂಸೆ ಮಾಡದಿರುವುದಷ್ಟೇ ಅಲ್ಲ, ಬದಲಿಗೆ ಹಿಂಸೆಗೆ ಅವಕಾಶವನ್ನು ನೀಡದಿರುವುದೂ ಆಗಿದೆ. ಯೋಗ ರೋಗಭಾದೆಯಿಂದ ಮುಕ್ತರಾಗಲು, ಸಧೃಡ ಶರೀರವನ್ನು ಹೊಂದಲು ಸಹಕರಿಸುತ್ತದೆ ಎಂದರಲ್ಲದೆ ಪ್ರಾಣಾಯಾಮವು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಮಾತನಾಡಿ ವಿಶ್ವ ಯೋಗ ದಿನಾಚರಣೆ ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿ ಇಡೀ ಮನುಕುಲದಲ್ಲಿ ಸಂಚಲನವನ್ನು ಮೂಡಿಸಿದೆ. ಯೋಗ ಚಿತ್ತಶುದ್ಧಿಯನ್ನು ಶುದ್ಧ ಬದುಕನ್ನು ಕಟ್ಟಿಕೊಡಬಲ್ಲುದು ಎಂದು ಹೇಳಿದರು. ಉಪಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗದಿನದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಸ್ವಾಗತಿಸಿದರು. ರೋಹಿಣಾಕ್ಷ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರವಿಶಂಕರ್ ವಿ.ಎಸ್ ಹಾಗೂ ನವೀನ್ ನಡೆಸಿಕೊಟ್ಟರು.