ನಿರಂತರ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ : ಡಾ.ಮಹಾಬಲ
ಪುತ್ತೂರು: ಮನಸ್ಸಿನ ಸ್ಥಿರತೆ, ದೇಹದ ದೃಢತೆ, ಒಳ್ಳೆಯ ಆರೋಗ್ಯ ಹಾಗೂ ದೀರ್ಘ ಆಯಸ್ಸಿಗಾಗಿ ಯೋಗ ಅಗತ್ಯ. ಆದರೆ ಕೇವಲ ಒಂದು ದಿನದ ಯೋಗಾಭ್ಯಾಸದಿಂದ ಯಾವುದೇ ಪರಿಣಾಮವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಬದಲಾಗಿ ದಿನನಿತ್ಯ ಅದನ್ನು ಆಚರಿಸುವುದರಿಂದ ದೇಹದಲ್ಲಿ ಒಳ್ಳೆಯ ಪರಿವರ್ತನೆಯನ್ನು ಗುರುತಿಸಬಹುದು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯೋಗ ನಿರ್ದೇಶಕ ಡಾ.ಮಹಾಬಲ ಪುಣ್ಚಿತ್ತೋಡಿ ಹೇಳಿದರು.
ಅವರು ವಿಶ್ವಯೋಗ ದಿನಾಚರಣೆಯ ಅಂಗವಾಗಿ ಗುರುವಾರ ಕಾಲೇಜಿನ ಐಕ್ಯುಎಸಿ ಘಟಕದ ವತಿಯಿಂದ ಕಾಲೇಜಿನ ಉದ್ಯೋಗಿಗಳಿಗಾಗಿ ಆಯೋಜಿಸಲಾದ ಉಪನ್ಯಾಸ ಹಾಗೂ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು.
ಮನಸ್ಸಿನ ಉನ್ನತ ಸ್ಥಿತಿಯನ್ನು ಸಮಾಧಿ ಎಂದು ಕರೆಯುತ್ತೇವೆ. ಸಮಾಧಿ ಎಂದರೆ ಚಿತ್ತವಿಲ್ಲದ ಅರ್ಥಾತ್ ಯೋಚನೆಗಳೇ ಇಲ್ಲದ ಸ್ಥಿತಿ. ಅಂತಹ ಮಟ್ಟಕ್ಕೆ ಏರುವುದು ಕಷ್ಟಸಾಧ್ಯವಾದರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಷ್ಟರ ಮಟ್ಟಿನ ಸಾಧನೆಯನ್ನು ಪ್ರತಿಯೊಬ್ಬರೂ ಮಾಡಬಹುದು. ಆಧುನಿಕ ಜಗತ್ತಿನ ವೇಗದ ಬದುಕನ ಮಧ್ಯೆ ನಮ್ಮನ್ನು ನಾವು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಯೋಗದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಸಿಡಿಟಿ, ಬಿ.ಪಿ, ಶುಗರ್ ಇಂದು ಅನೇಕ ಮಂದಿಯಲ್ಲಿ ಕಾಣಿಸುವಂತಹ ಸಾಮಾನ್ಯ ಸಂಗತಿಯಾಗಿದೆ. ಆದರೆ ಇವುಗಳು ಮನುಷ್ಯನಿಗೆ ನೀಡುವ ಉಪಟಳ ಅಸಾಮಾನ್ಯವಾದದ್ದು. ಈ ಖಾಯಿಲೆಗಳಿಂದ ಸಾಕಷ್ಟು ಜೀವನ ಜಿಗುಪ್ಸೆ ಕಂಡವರೂ ಇದ್ದಾರೆ. ಆದರೆ ಕೆಲವೊಂದು ಆಸನಗಳಿಂದ ಅಂತಹ ಉಪದ್ರವಕಾರಿ ಖಾಯಿಲೆಗಳಿಂದ ಮುಖ್ತಿ ಪಡೆಯುವುದಕ್ಕೆ ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಯೋಗ ಯೋಗ ಕೇವಲ ದೈಹಿಕ ಮಾತ್ರವಲ್ಲದೆ ಮಾನಸಿಕ ದೃಢತೆಗೂ ಸಂಬಂಧಿಸಿದ್ದಾಗಿದೆ. ವೃತ್ತಿ ಬದುಕಿನಲ್ಲಿ ಸಾಕಷ್ಟು ಒತ್ತಡಗಳಿರುವುದು ಸಹಜ. ಅಂತಹ ಒತ್ತಡಗಳಿಂದ ಮುಕ್ತವಾಗಲು ಯೋಗಾಭ್ಯಾಸ ಅಗತ್ಯ. ಯೋಗ ಎನ್ನುವುದು ಆತ್ಮದಿಂದ, ಆತ್ಮದ ಮೂಲಕ ಆತ್ಮದೆಡೆಗೆ ಸಾಗುವ ಪ್ರಯಾಣ ಎಂದು ತಿಳಿಸಿದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಎಚ್.ಜಿ.ಶ್ರೀಧರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ಸಭಾ ಕಾರ್ಯಕ್ರಮದ ತರುವಾಯ ಯೋಗಾಭ್ಯಾಸ ನಡೆಯಿತು.