Principal’s Desk
From the Principal’s Desk
ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ 1965 ರಲ್ಲಿ ಪುತ್ತೂರಿನಲ್ಲಿ ಪ್ರಾರಂಭಗೊಂಡ ವಿವೇಕಾನಂದ ಮಹಾವಿದ್ಯಾಲಯ ಅಸ್ತಿತ್ವಕ್ಕೆ ಬರಲು ಒಂದು ಬಲವಾದ ಕಾರಣ ಮತ್ತು ಉದ್ದೇಶವಿತ್ತು. ಅದುವೇ ರಾಷ್ಟ್ರೀಯತೇ. ನಮ್ಮ ಸಂಸ್ಕೃತಿಗೆ ತೊಂದರೆ ಬಂದಾಗ ಅದನ್ನು ಉಳಿಸುವ ದೃಷ್ಟಿಯಿಂದ ಶಿಕ್ಷಣದೊಂದಿಗೆ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಧ್ಯೇಯವನ್ನು ಇಟ್ಟುಕೊಂಡು ಇಂದಿಗೂ ಅದನ್ನು ಬೆಳೆಸುತ್ತಾ ನಮ್ಮ ಯುವ ಜನಾಂಗಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ವಿಷಯ. ಆ ಸಂದರ್ಭದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಶ್ರೀಯುತ ಕೆ.ರಾಮಭಟ್ ಮತ್ತು ಪುತ್ತೂರಿನ ಇನ್ನುಳಿದ ಎಲ್ಲಾ ಹಿರಿಯರಿಗೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.
ಈ ಸಂಸ್ಥೆಯ ಮುಖ್ಯಸ್ಥನಾಗಿ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ, ಪುತ್ತೂರಿನ ಹಾಗೂ ಈ ಕಾಲೇಜಿನ ಎಲ್ಲಾ ಅಭಿಮಾನಿಗಳಿಗೆ ಅಭಿನಂದನೆಗಳು. ತಮಗೆಲ್ಲ ತಿಳಿದಿರುವಂತೆ ನಮ್ಮ ಕಾಲೇಜು ಒಂದು ಸುಂದರವಾದ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಒಂದನ್ನೇ ಉದ್ದೇಶವಾಗಿ ಇಟ್ಟುಕೊಂಡು ಬರದೆ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಬರುತ್ತಿದ್ದಾರೆ ಎಂಬುದು ನಮಗೆಲ್ಲ ತಿಳಿದಿರುವ ಸಂಗತಿ. ಅದೇ ಕಾರಣದಿಂದ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಜನೆಗೆ ಬಂದ ವಿದ್ಯಾರ್ಥಿಗಳಿಗೆ ಕೇವಲ ಪಾಠ ಪ್ರವಚನಗಳನ್ನು ಜತೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವ ದೃಷ್ಟಿಯಿಂದ ಹಲವಾರು ಪಠ್ಯೇತರ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಮತ್ತು ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರಿಪಿಸುತ್ತೇವೆ. ಈ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳು ಆಗಬೇಕು ಎನ್ನುವುದು ನಮ್ಮ ಆಶಯ.
ಆದುದರಿಂದ ವಿದ್ಯಾರ್ಥಿಗಳಲ್ಲಿ ಕೇಳಿಕೊಳ್ಳುವುದೆನೆಂದರೆ, ಕಾಲೇಜಿನಲ್ಲಿ ಉತ್ತಮವಾದ ಅಂಕಗಳನ್ನು ಪಡೆಯುವದರ ಜತೆಗೆ ತಮ್ಮ ಜೀವನದಲ್ಲಿ ರಾಷ್ಟ್ರೀಯ ಚಿಂತನೆಯನ್ನು ಬೆಳಿಸಿಕೊಳ್ಳುತ್ತಾ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾಯಕವನ್ನು ಮೈಗೂಡಿಸಿಕೊಳ್ಳುತ್ತಾ ವಿವೇಕಾನಂದ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳಾಗಿ ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂಬುದು ನನ್ನ ಆಶಯ. ಅಲ್ಲದೇ ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು, ಸಮಯ ಪಾಲನೆ, ಗುರುಹಿರಿಯರಲ್ಲಿ ವಿಧೇಯತೆ ಇತ್ಯಾದಿಗಳನ್ನು ಕೂಡ ಶಿಕ್ಷಣದ ಭಾಗವೇ ಎಂದು ತಿಳಿದುಕೊಂಡು ಅದನ್ನು ಅನುಸರಿಸಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿ ವಿನಂತಿ.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಬಗ್ಗೆ ಇರಬೇಕಾದ ಜವಾಬ್ದಾರಿಯನ್ನು ಅರಿತುಕೊಂಡು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿ. ಹೀಗೆ ಹೇಳಲು ಕಾರಣವೇನೆಂದರೆ ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ ತಕ್ಷಣ ತಾವಿನ್ನು ಪ್ರಬುದ್ದರಾದೆವೆಂದು ತಮಗಿನ್ನು ಪೋಷಕರ ಬೆಂಬಲದ ಅಗತ್ಯವಿಲ್ಲವೆಂದು ಭಾವಿಸತೊಡಗುತ್ತಾರೆ. ಅಷ್ಟೇ ಅಲ್ಲದೇ ತಮ್ಮ ಪೋಷಕರು ಕಾಲೇಜಿಗೆ ಬರುವುದನ್ನು ಸಹಿಸದ ವಿದ್ಯಾರ್ಥಿಗಳೂ ಇದ್ದಾರೆ. ಶಾಲಾ ಹಂತ ಮುಗಿದು ಕಾಲೇಜು ಸೇರಿದ ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಒಂದೆಡೆ, ಶಿಕ್ಷಿಸಿ ಮುದ್ದಿಸಬಹುದಾದ ಮಕ್ಕಳೂ ಅಲ್ಲ ಅತ್ತ ಕಡೆ ಸ್ವಾತಂತ್ರ್ಯ ನೀಡಿ ಅವರ ಪಾಡಿಗೆ ಬಿಟ್ಟುಬಿಡಬಹುದಾದ ಸ್ಥಿತಿಯೂ ಇಲ್ಲ. ಈ ಕಾರಣದಿಂದಾಗಿ ಪೋಷಕರು ತಮ್ಮ ಮಕ್ಕಳ ವಿಷಯದಲ್ಲಿ ಕಾಲೇಜಿನೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಸಹಕರಿಸುವ ಅಗತ್ಯ ಇದೆ ಎಂಬುದು ನನ್ನ ಅಭಿಪ್ರಾಯ.
ವಿವೇಕಾನಂದ ಕಾಲೇಜಿಗೆ ತನ್ನದೇ ಆದ ಒಂದು ಇತಿಹಾಸ, ವೈಶಿಷ್ಟತೆ ಇದೆ. ಇದನ್ನು ಗಮನಿಸಿ ಬರುವ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿಯತನಕ ಈ ವಿದ್ಯಾಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ನಮ್ಮ ಕಾಲೇಜಿನ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಇನ್ನು ಮುಂದೆ ಕೂಡ ಅಂತಹ ನೂರಾರು ವಿಧ್ಯಾರ್ಥಿಗಳನ್ನು ಈ ಸಮಾಜಕ್ಕೆ ನೀಡಬೇಕೆಂದು ನನ್ನ ಆಶಯ. ಈ ನಿಟ್ಟಿನಲ್ಲಿ, ನಮ್ಮ ಕಾಲೇಜಿನ ಮೇಲಿನ ಅಭಿಮಾನದಿಂದ ತಮ್ಮ ಮಕ್ಕಳನ್ನು ಈ ವಿದ್ಯಾಲಯಕ್ಕೆ ಸೇರಿಸುತ್ತಿರುವ ಹೆತ್ತವರಿಗೆ ಮನದಾಳದ ಅಭಿನಂದನೆಗಳು. ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ನನ್ನ ಮತ್ತು ನನ್ನೆಲ್ಲ ಅಧ್ಯಾಪಕರ ಪಾತ್ರ ಏನು ಎಂಬುದನ್ನು ಅರಿತು, ಆ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಪ್ರಯತ್ನಿಸುತ್ತೇವೆ. ಅದಕ್ಕೆ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇನೆ. ಕೊನೆಯದಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಂತೆ, ಆಡಳಿತ ಮಂಡಳಿ ನಿರ್ದೇಶನದಂತೆ ಈ ವಿದ್ಯಾಲಯದ ಘನತೆ, ಗೌರವವನ್ನು ಇನ್ನುಷ್ಟು ಎತ್ತರಕ್ಕೆ ಬೆಳೆಸುವ ಸಂಕಲ್ಪ ನನ್ನದು.
ಧನ್ಯವಾದಗಳೊಂದಿಗೆ,
ಜೈ ಹಿಂದ್,
Prof.Vishnu Ganapathi Bhat
M.Sc, M.Phil
Principal
Contact:
+91 8251 233 635 (Principal’s Office)
+91 8251 233 0455 (Admn. Office)
+91 9448240975 (Cell)
Email us: principalvcputtur@gmail.com Website: www.vcputtur.ac.in