VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜು: ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆ – ಅನ್ಯರ ಅನುಭವದಿಂದ ಪಾಠ ಕಲಿಯಬೇಕು: ಡಾ.ಪಾದೆಕಲ್ಲು ವಿಷ್ಣು ಭಟ್

ಪುತ್ತೂರು: ಶಿಕ್ಷಣ ಎನ್ನುವಂತಹದ್ದು ಕೇವಲ ಕಾಲೇಜಿನಲ್ಲಿ ಪಡೆಯುವಂತಹದ್ದಲ್ಲ. ಎಲ್ಲೆಲ್ಲಿ ಅನುಭವ ದೊರೆಯುತ್ತದೆಯೇ ಅಲ್ಲಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ಒಳ್ಳೆಯ ವಿಷಯಗಳನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅನುಭವ ಯಾರಲ್ಲಿದೆಯೋ ಅಲ್ಲಿಗೆ ತೆರಳಿ ಪಡೆಯುವ ಗುಣ ಬೆಳೆಸಿಕೊಂಡಾಗ ವ್ಯಕ್ತಿತ್ವ ಅರಳುವುದಕ್ಕೆ ಸಾಧ್ಯ ಎಂದು ಉಡುಪಿಯ ವಿಶ್ರಾಂತ ಪ್ರಾಚಾರ್ಯ ಡಾ. ಪಾದೆಕಲ್ಲು ವಿಷ್ಣು ಭಟ್ಟ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು.

ವಿವೇಕಾನಂದ ಕಾಲೇಜನ್ನು ಹಿರಿಯರು ವಿವೇಕಾನಂದರ ಜೀವನ, ತತ್ವ, ರಾಷ್ಟ್ರೀಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ಆರಂಭಿಸಿದ್ದಾರೆ. ಈ ವಿಚಾರಗಳನ್ನು ಎಲ್ಲರೂ ಅರಿತು ವಿದ್ಯಾರ್ಜನೆ ಮಾಡಬೇಕು. ವಿವೇಕಾನಂದ ಕಾಲೇಜನ್ನು ವಿಸಿ ಎನ್ನುವ ಬದಲು ಪೂರ್ಣ ಹೆಸರಿನಿಂದ ಗುರುತಿಸಿ ಮಹಾತ್ಮರನ್ನು ನೆನಪಿಸಿಕೊಳ್ಳಬೇಕುದುವ ಹವ್ಯಾಸ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ ಎಂದು ನುಡಿದರು.

ಗೌರವಾರ್ಪಣೆ

ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಬಿ. ಜನಾರ್ದನ ಭಟ್, ಪ್ರೊ. ಕೆ.ಆರ್. ರವಿರಾವ್, ಪ್ರೊ. ಎ.ವಿ. ನಾರಾಯಣ ಅವರನ್ನು ಶಾಲು, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಕನ್ಯಾನ ಭಾರತ ಸೇವಾಶ್ರಮದ ಎಸ್. ಈಶ್ವರ ಭಟ್ಟ, ಯಕ್ಷಗಾನ ಭಾಗವತೆ ಕಾವ್ಯಶ್ರೀ ಅಜೇರು ಅವರಿಗೆ ಗೌರವಾರ್ಪಣೆ ನಡೆಯಲಿದೆ.

ಬಿಎಸ್ಸಿಯಲ್ಲಿ ೨ನೇ ರ್‍ಯಾಂಕ್ ಪಡೆದ ರೂಪಶ್ರೀ, ಬಿಝಡ್‌ಸಿಯಲ್ಲಿ ೭ನೇ ರ್‍ಯಾಂಕ್ ಪಡೆದ ಮನ್ವಿತಾ ಕೆ., ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದಲ್ಲಿ ೨ನೇ ರ್‍ಯಾಂಕ್ ಪಡೆದ ಪಲ್ಲವಿ ಕೆ. ಅವರ ಶೈಕ್ಷಣಿಕ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ದೆಹಲಿಯ ಆರ್‌ಡಿ ಪರೇಡ್‌ನಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್‌ಗಳಾದ ಜೂನಿಯರ್ ಅಂಡರ್ ಆಫೀಸರ್ ಪ್ರಿಯಾ ಡಿ., ಸಾರ್ಜಂಟ್ ಅಂಕಿತಾ ಪಿ., ಯೋಗ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕಾರ್ತಿಕ್ ಬಿ. ಅವರನ್ನು ಸನ್ಮಾನಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ  ಪ್ರೊ. ಬಿ. ಜನಾರ್ದನ ಭಟ್, ವಿವೇಕಾನಂದ ಕಾಲೇಜಿನಲ್ಲಿ ಸಲ್ಲಿಸಿದ ಸೇವೆ ನೆನಪಿನ ಹೊಸ ಚೈತನ್ಯವನ್ನು ನೀಡಿದೆ. ಇಲ್ಲಿ ಕಳೆದ ನೆನಪುಗಳು ಹಲವಿದೆ. ಈ ಕಾಲೇಜಿನ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಗಳು ನೀಡುವ ಪ್ರೀತಿ, ವಿಶ್ವಾಸ ಅದಮ್ಯ. ಹಾಗಾಗಿ ವಿದ್ಯಾರ್ಥಿಗಳ ಋಣ ನಮ್ಮ ಮೇಲಿದೆ. ಇದರ ಇನ್ನೊಂದು ಕೆಲಸವೇ ಈ ಗೌರವಾರ್ಪಣೆಯಾಗಿದೆ ಎಂದು ಸಂತೋಷಪಟ್ಟರು.

ಗೌರವ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಪ್ರೊ. ಕೆ.ಆರ್. ರವಿರಾವ್, ಇಂದು ನೀಡಿದ ಗೌರವದಿಂದ ಹೃದಯ ತುಂಬಿ ಬಂತು. ಜೀವನದಲ್ಲಿ ಇದೊಂದು ಮರೆಯಲಾಗದ ಸಂದರ್ಭ ಎಂದು ಹೇಳಿ ಹಿರಿಯ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಮತ್ತೋರ್ವ ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ವಿ. ನಾರಾಯಣ, ವಿವೇಕಾನಂದ ಕಾಲೇಜಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ತನ್ನ ವಿಶ್ರಾಂತ ಜೀವನದ ಬಳಿಕವೂ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ದೊರೆತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಕನ್ಯಾನ ಭಾರತ ಸೇವಾಶ್ರಮದ ಎಸ್. ಈಶ್ವರ ಭಟ್ಟ ಮಾತನಾಡಿ, ವಿವೇಕಾನಂದ ಕಾಲೇಜು ವಿದ್ಯೆ, ಸಂಸ್ಕೃತಿಯೊಂದಿಗೆ ಸಮಾಜಸೇವೆ ಎಂಬ ಶಿಕ್ಷಣವನ್ನು ನೀಡಿದೆ. ಜ್ಞಾನದೊಂದಿಗೆ ಸಮಾಜದೊಂದಿಗೆ ಬೆರೆಯುವ ಕಾರ್ಯವನ್ನೂ ಕಾಲೇಜು ಕಲಿಸಿದೆ. ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಯಕ್ಷಗಾನ ಭಾಗವತೆ ಕಾವ್ಯಶ್ರೀ ಅಜೇರು ಮಾತನಾಡಿ, ವಿವೇಕಾನಂದ ಕಾಲೇಜಿನಲ್ಲಿ ಕಲಿತು ಹೋದ ವಿದ್ಯಾರ್ಥಿಗಳು ಸಮಾಜದ ನಾನಾ ಕಡೆಗಳಲ್ಲಿ ಸಿಗುತ್ತಾರೆ. ಇದು ವಿವೇಕಾನಂದ ಕಾಲೇಜಿನಲ್ಲಿ ಕಲಿತ ನನಗೆ ಹೆಮ್ಮೆಯ ವಿಚಾರ ಎಂದು ಹೇಳಿ ಒಂದು ಗಾನವನ್ನು ಹಾಡಿದರು.

ಪೆರ್ಲದ ನಾಲಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಘ್ನೇಶ್ವರ ವರ್ಮುಡಿ ಅಭಿನಂದನಾ ಭಾಷಣ ಮಾಡಿ, ಗೌರವಾರ್ಪಣೆಯನ್ನು ಸ್ವೀಕರಿಸಿದ ವಿಶ್ರಾಂತ ಮೂರು ಪ್ರಾಚಾರ್ಯರು ಸರಳ, ಸಜ್ಜನ, ಸಾತ್ವಿಕ ಹೃದಯವಂತ ವ್ಯಕ್ತಿತ್ವವನ್ನು ಹೊಂದಿದವರು. ಮೂರುವರೆ ದಶಕಗಳ ಕಾಲ ಈ ಮೂವರು ಕಾಲೇಜಿಗೆ ನೀಡಿದ ಸೇವೆ, ವಿಶೇಷ ಕಾಳಜಿ ಇಂದಿಗೂ ಹೊಂದಿದ್ದಾರೆ. ಇವರು ಕಾಲೇಜು ಇಂದು ಇಷ್ಟು ಎತ್ತರಕ್ಕೆ ಏರಲು ಆಧಾರಸ್ತಂಭಗಳಾಗಿದ್ದಾರೆ ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಚಳ್ಳಂಗಾರು ಮಾತನಾಡಿ, ಇಂದು ಗೌರವಿಸಿದ ಹಿರಿಯ ಪ್ರಾಚಾರ್ಯರು ಇಂದಿನ ಯುವ ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹೇಳಿ ಶುಭಹಾರೈಸಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ತಾಳ್ತಜೆ ವಸಂತ ಕುಮಾರ ವಹಿಸಿ, ಆಧುನಿಕ ದಿನಮಾನಗಳಲ್ಲಿ ಎಲ್ಲವನ್ನೂ ಹ್ರಸ್ವ ಗೊಳಿಸುವ ಪದ್ದತಿ ಚಾಲ್ತಿಗೆ ಬರುತ್ತಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಪೂರ್ಣತೆಗೆ ಹೆಚ್ಚು ಮಹತ್ವವಿರುತ್ತದೆ. ವಿದ್ಯಾರ್ಥಿಗಳು ಈ ಸಂಗತಿಯನ್ನು ಮನಗಂಡು ಬೆಳೆಯಬೇಕು. ವಿವೇಕಾನಂದ ಕಾಲೇಜಿನಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ಅಪಾರ ಅವಕಾಶವಿದೆ. ಗತಕಾಲದ ಸಾಕ್ಷಿಗಳಿಗೆ ಕಿವಿಯಾದಾಗ ಅನೇಕ ವೈವಿಧ್ಯಮಯ ಸಂಗತಿಗಳು ಅನಾವರಣಗೊಳ್ಳುತ್ತದೆ ಎಂದು ಹೇಳಿದರು.

ಪ್ರಾಚಾರ್ಯ ಹಾಗೂ ಹಿರಿಯ ಸಂಘದ ಕಾರ್ಯಾಧ್ಯಕ್ಷ ಪ್ರೊ. ವಿಷ್ಣು ಗಣಪತಿ ಭಟ್ ಶುಭಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜನಾರ್ದನ ಭಟ್ ಎಸ್. ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಶ್ಮಿ ಮತ್ತು ತಂಡದವರು ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಸುಪ್ರಭ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ. ಮನಮೋಹನ ಕೆ. ಸನ್ಮಾತ ಪತ್ರ ವಾಚಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸರಸ್ವತಿ ಸಿ.ಕೆ. ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ, ವಾಣಿಜ್ಯ ಉಪನ್ಯಾಸಕಿ ಶ್ವೇತಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್, ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಕೃಷ್ಣಗಣರಾಜ ಭಟ್, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಈಶ್ವರ ಪ್ರಸಾದ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸೌಮಿತ್ರ ವಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.