ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ತೆರೆ – ಎಸ್ಡಿಎಂ ಉಜಿರೆ ಪ್ರಥಮ, ಮಂಗಳೂರು ವಿಕಾಸ್ ಕಾಲೇಜು ದ್ವಿತೀಯ ; ಕಬಡ್ಡಿ ಆಟಗಾರ ಬದುಕಿನಲ್ಲಿ ಸೋಲಲಾರ: ಮುರಳಿಕೃಷ್ಣ
ಪುತ್ತೂರು: ಕಬಡ್ಡಿ ಆಟದಲ್ಲಿ ತೆಗೆದುಕೊಳ್ಳುವ ಒಂದು ಸಣ್ಣ ನಿರ್ಧಾರದಿಂದ ಸೋಲುಂಟಾಗಬಹುದು. ಆದರೆ ಬದುಕಿನಲ್ಲಿ ಕಬಡ್ಡಿ ಆಟಗಾರ ಎಂದಿಗೂ ಸೋಲಲಾರ. ಮಣ್ಣಿನ ಆಟವನ್ನು ಆರಿಸಿಕೊಂಡ ವಿದ್ಯಾರ್ಥಿಗಳ ಶ್ರಮ, ಸಾಧನೆ ಅನನ್ಯ ಈ ಕ್ಷೇತ್ರದಲ್ಲಿನ ಕ್ರೀಡಾಳುಗಳು ಇನ್ನಷ್ಟು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡ ಎರಡು ದಿನಗಳ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಕರ್ನಾಟಕವನ್ನು ಪ್ರತಿನಿಧಿಸು ಕಬಡ್ಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿ. ಮುಂದಕ್ಕೆ ರಾಷ್ಟ್ರೀಯ ಕಬಡ್ಡಿ ತಂಡವನ್ನು ಪ್ರತಿನಿಧಿಸುವಂತಾಗಲಿ. ಅದೇ ರೀತಿ ಕಬಡ್ಡಿ ಕ್ಷೇತ್ರದಲ್ಲಿ ಆಟವಾಡುತ್ತಿರುವ ವಿದ್ಯಾರ್ಥಿಗಳ ಬದುಕು ಮುಂದಕ್ಕೆ ಉತ್ತಮವಾಗಿರುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯ ವಿಭಾಗದ ಪರಿವೀಕ್ಷಕ, ರಾಷ್ಟ್ರೀಯ ಕಬಡ್ಡಿ ಆಟಗಾರ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ರವಿ ಸುವರ್ಣ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ರಾಷ್ಟ್ರೀಯ ಕಬಡ್ಡಿ ತಂಡಗಳಲ್ಲಿ ಭಾಗವಹಿಸುವಂತಾಗಬೇಕು. ಕ್ರೀಡಾ ಕ್ಷೇತ್ರದಲ್ಲಿ ಗುರಿ ಇಟ್ಟುಕೊಂಡು ಪರಿಶ್ರಮವನ್ನು ಹಾಕಿ ಗುರುವಿನ ಮಾರ್ಗದರ್ಶನದೊಂದಿಗೆ ಸಾಧನೆ ಮಾಡಬಹುದು ಎಂದು ಹೇಳಿದರು.
ಮಂಗಳೂರು ವಿವಿಯಿಂದ ಪಂದ್ಯಾಟಕ್ಕಾಗಿ ಆಗಮಿಸಿದ ಪರಿವೀಕ್ಷಕ ಹರಿದಾಸ್ ಕೂಳೂರು ಅಭಿಪ್ರಾಯ ಹಂಚಿಕೊಂಡರು. ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಮಾಣಿ, ಭದ್ರಾವತಿಯ ಕ್ಯಾಂಪ್ಕೊ ವಿಭಾಗದ ಮ್ಯಾನೇಜರ್ ಬಿಪಿನ್ ಕುಮಾರ್ ಶೆಟ್ಟಿ ಮಾಣಿ, ಬೆಂಗಳೂರಿನ ಆಡಿ ಕಂಪೆನಿಯ ಹೆಚ್.ಆರ್. ಮ್ಯಾನೇಜರ್ ವಿಕಾಸ್ ಮಾಣಿ, ಆಡಳಿತ ಮಂಡಳಿಯ ಕೋಶಾಧಿಕಾರಿ ಜನಾರ್ದನ ಭಟ್ ಎಸ್., ಸದಸ್ಯರಾದ ಎಂ. ಅನಂತಕೃಷ್ಣ ನಾಯಕ್, ಶೋಭಾ ಕೊಳತ್ತಾಯ ಎನ್., ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಐಕ್ಯುಎಸಿ ಘಟಕದ ಸಂಯೋಜಕ ಡಾ. ಶ್ರೀಧರ ಎಚ್.ಜಿ., ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಪ್ರೊ. ಕೃಷ್ಣ ಕಾರಂತ, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ಮಾಧವ ಬಿ.ಕೆ., ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್. ಯತೀಶ್ ಕುಮಾರ್ ಬಿ. ಸ್ವಾಗತಿಸಿದರು. ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವಿಟ್ಲ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಬಹುಮಾನ ವಿತರಣೆ
ಎರಡು ದಿನ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಒಟ್ಟು ೩೯ ಕಾಲೇಜುಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಮಂಗಳೂರಿನ ವಿಕಾಸ್ ಕಾಲೇಜು ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಚತುರ್ಥ ಸ್ಥಾನವನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಪಡೆದುಕೊಂಡಿತು.
ವೈಯಕ್ತಿಕ ಬಹುಮಾನ
ಉತ್ತಮ ರೈಡರ್ ಪ್ರಶಸ್ತಿಯನ್ನು ಉಜಿರೆ ಎಸ್ಡಿಎಂ ಕಾಲೇಜಿನ ಮಿಥಿನ್ ಕುಮಾರ್, ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಸುಳ್ಯ ಎನ್ಎಂಸಿ ಕಾಲೇಜಿನ ರಥನ್, ಮಂಗಳೂರು ವಿಕಾಸ್ ಕಾಲೇಜಿನ ಶ್ರವಣ್ಗೌಡ ಅವರು ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದರು.