ಮನೆ ಬೆಳಗ ಬೇಕಾದರೆ ಹಿರಿಯರ ಮಾರ್ಗದರ್ಶನ ಅಗತ್ಯ : ಸಾಯಿರಾಮ್
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನರು ತಮ್ಮ ಘನತೆ, ಗೌರವಗೋಸ್ಕರ ಆಧುನಿಕ ಶೈಲಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ತುಳುನಾಡಿನ ಆಚರಣೆಗಳು ಮರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಮನೆ ಬೆಳಗಬೇಕಾದರೆ ಹಿರಿಯರ ತಿಳಿಸಿಕೊಟ್ಟ ಸಂಸ್ಕಾರವನ್ನು ಮುಂದುವರೆಸಬೇಕು. ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಭಾಷೆಯನ್ನು ಕಲಿಯಲು ಸಾಧ್ಯ ಎಂದು ತೆಗ್‌ರ್ ತುಳು ಕೂಟೊದ ಸಂಚಾಲಕ ಉಮೇಶ ಸಾಯಿರಾಮ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ಆದಿತ್ಯವಾರ ನಡೆದ ಆಟಿದ ಐತಾರ ಕಜ್ಜ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೂಜೆಗೆ ಅರ್ಹವಾದ ಅಶ್ವತ ಮರಕ್ಕೆ ಸಮನಾಗಿ ತುಳುನಾಡಿನಲ್ಲಿ ಹಾಲೆಮರ ಇದೆ. ಆಟಿ ತಿಂಗಳ ಅಮವಾಸ್ಯೆಯ ದಿನ ಹಾಲೆ ಮರದ ಕಷಾಯವನ್ನು ಕುಡಿಯುತ್ತಾರೆ. ಇದು ಇಡೀ ವರ್ಷ ಆರೋಗ್ಯವನ್ನು ಕಾಪಾಡುತ್ತದೆ. ಹಿಂದಿನ ಕಾಲದಲ್ಲಿ ಸಾವಯುವ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಆದರೆ ಇವತ್ತಿನ ದಿನಗಳಲ್ಲಿ ರಾಸಯನಿಕ ಆಹಾರ ಪದ್ಧತಿಗೆ ಜನರು ಮಾರುಹೋಗಿದ್ದಾರೆ. ಜೀವನದ ಸ್ವಾವಲಂಬನೆಗಾಗಿ ಸಾವಯುವ ಆಹಾರ ಪದ್ಧತಿಯ ಅವಶ್ಯಕತೆಯಿದೆ. ಇದರಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಗಂ ಸಾಹಿತ್ಯ, ಗ್ರೀಕ್‌ನ ಪ್ರಹಸನದಲ್ಲಿ ತುಳುಭಾಷೆಯ ಅಳವಡಿಕೆಯಾಗಿದೆ ಹಾಗೂ ಐದು ದ್ರಾವಿಡ ಮೂಲ ಭಾಷೆಯಲ್ಲಿ ಮೊದಲನೇ ಕವಲು ತುಳುಭಾಷೆಯಾಗಿದೆ. ಜನಪದ ಕಲೆಗಳು ಅದ್ಭುತ ಗಣಿಯನ್ನು ಹೊಂದಿದ ಪ್ರದೇಶ. ಯಕ್ಷಗಾನ ತುಳು ಪರಂಪರೆಯ ರಾಯಭಾರಿಯಾಗಿದೆ. ತುಳುನಾಡಿನ ಹಬ್ಬಗಳನ್ನು ಆಚರಣೆ ಮಾಡಿದಾಗ ತುಳು ಪರಂಪರೆಯನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ತುಳು ಸಂಘದ ಸಂಯೋಜಕರಾದ ಪ್ರೊ. ನರಸಿಂಹ ಭಟ್‌ಎನ್. ಹಾಗೂ ಡಾ. ಶ್ರೀಶ ಕುಮಾರ್ ಎಂ.ಕೆ. ಮತ್ತು ಜತೆ ಕಾರ್‍ಯದರ್ಶಿ ಮಮತಾ ಎಸ್. ಉಪಸ್ಥಿತರಿದ್ದರು. ತುಳು ಸಂಘದ ಅಧ್ಯಕ್ಷೆ ಭಾಗ್ಯಶ್ರೀ ಸ್ವಾಗತಿಸಿ, ಕಾರ್‍ಯದರ್ಶಿ ಶ್ವೇತಾ ವಂದಿಸಿದರು.