
ಪುತ್ತೂರು: ಆದಾಯ ತೆರಿಗೆಯು ಭಾರತ ಸರ್ಕಾರದ ಅತಿ ದೊಡ್ಡ ಮತ್ತು ಮಹತ್ವದ ಆದಾಯ ಮೂಲವಾಗಿದೆ. ಸರ್ಕಾರದ ಆದಾಯದ ಶೇ. 90ರಷ್ಟು ಭಾಗ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಹೊಂದಿದೆ. ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಎಂಬ ಎರಡು ವಿಧಗಳಿವೆ. ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಒಂದಲ್ಲ ಒಂದು ರೀತಿಯ ತೆರಿಗೆಗಳನ್ನು ವಿಧಿಸುತ್ತದೆ. ತೆರಿಗೆ ವಿಧಿಸದ ಯಾವುದೇ ದೇಶ ಇರಲು ಸಾಧ್ಯವಿಲ್ಲ. ಜನರು ಆದಾಯ ತೆರಿಗೆ ಪಾವತಿಸುವುದನ್ನು ತಪ್ಪಿಸಿದರೆ ಅದು ರಾಷ್ಟ್ರದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರುತ್ತದೆ ಎಂದು ಪುತ್ತೂರಿನ ಆದಾಯ ತೆರಿಗೆ ಅಧಿಕಾರಿ ಸುದರ್ಶನ್ ರಾವ್ ಕೆ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರಿನಲ್ಲಿ ವಾಣಿಜ್ಯ ವಿಭಾಗ, ಐಕ್ಯೂಎಸಿ ಘಟಕ ಮತ್ತು ಪುತ್ತೂರಿನ ಆದಾಯ ತೆರಿಗೆ ಇಲಾಖೆ ವತಿಯಿಂದ ನಡೆದ ಆದಾಯ ತೆರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ನಿರೀಕ್ಷಕ ಜಿತೇಂದ್ರ ಜೋಶಿಯ, ತೆರಿಗೆ ಸಹಾಯಕ ತೇಜಸ್ವಿ ಮಕಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಏಸಿ ಘಟಕದ ಸಂಯೋಜಕಿ ಮತ್ತು ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರವಿಕಲಾ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ನಾಯಕ್ ವಂದಿಸಿದರು. ತೃತೀಯ ಬಿ. ಕಾಂ ವಿದ್ಯಾರ್ಥಿನಿ ಸಾತ್ವಿ ಕಾರ್ಯಕ್ರಮವನ್ನು ನಿರೂಪಿಸಿದರು
