
ಪುತ್ತೂರು ಮೇ.19: ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರು
ಚಟುವಟಿಕೆಗಳನ್ನು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ
ಮಾಡಬೇಕು. ಪರೀಕ್ಷೆಗಳಷ್ಟೇ ಚಟುವಟಿಕೆಗಳು ಕೂಡಾ ವಿದ್ಯಾರ್ಥಿಗಳಿಗೆ
ಅಗತ್ಯ. ಭಾಷಾ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ
ಮೂಲಕ ಉತ್ತಮ ನಾಗರಿಕರನ್ನು ಹುಟ್ಟುಹಾಕಬೇಕು. ಭಾರತದಲ್ಲಿರುವ
ವೈವಿಧ್ಯಯ ಸಂಸ್ಕೃತಿಯ ಜನರ ನಡುವೆ ಏಕತೆಯನ್ನು ಬೆಳೆಸುವ ಜವಾಬ್ದಾರಿ
ಭಾಷಾ ಶಿಕ್ಷಕರ ಮೇಲಿದೆ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ
ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ ಹೇಳಿದರು.
ಅವರು ವಿವೇಕಾನಂದ ಕಲಾ,ವಾಣಿಜ್ಯ ಮತ್ತು ವಿಜ್ನಾನ (ಸ್ವಾಯತ್ತ)
ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಪರೀಕ್ಷಣ ಸೇವೆ-ಭಾರತ, ಭಾರತೀಯ ಭಾಷಾ
ಸಂಸ್ಥಾನ ಶಿಕ್ಷಣ ಸಚಿವಾಲಯ ಹಾಗೂ ಮೈಸೂರು ಮಾನಸಗಂಗೋತ್ರಿಯ
ಆಶ್ರಯದಲ್ಲಿ ಆಯೋಜಿಸಲಾಗಿರುವ ಆರು ದಿನಗಳ ಕನ್ನಡ ಹಾಗೂ ಹಿಂದಿ ಭಾಷಾ
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಾಲೇಜಿನ ಆಡಳಿತ ಮಂಡಳಿಯ
ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ನಾಗರಿಕತೆಯ ಮೂಲ ಆಧಾರ
ಭಾಷೆ. ಆದ್ದರಿಂದಲೇ ಯುವಜನಾಂಗದ ನಿರ್ಮಾಣದಲ್ಲಿ ಭಾಷಾ ಶಿಕ್ಷಣ ಮುಖ್ಯವಾಗಿದೆ. ಭಾಷಾ
ಶಿಕ್ಷಕರು ಅಭಿವ್ಯಕ್ತಗೊಳಿಸುವ ಪ್ರತಿಯೊಂದು ಕ್ರಿಯೆಯೂ ವಿದ್ಯಾರ್ಥಿಗಳ
ಮೇಲೆ ಪರಿಣಾಮ ಬೀಳುತ್ತದೆ. ಹಾಗಾಗಿ ಬೋಧಿಸುವ, ಮೌಲ್ಯಮಾಪನ ಮಾಡುವ
ವಿಧಾನಗಳನ್ನು ಪರಿಪೂರ್ಣವಾಗಿಸುವಲ್ಲಿ ಶಿಕ್ಷಕರು ಗಮನವಹಿಸಬೇಕು ಎಂದು
ಹೇಳಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಅಭಿನಂದನಾ
ನುಡಿಗಳನ್ನಾಡಿದರು. ಭಾರತೀಯ ಭಾಷಾ ಸಂಸ್ಥಾನದ ಹಿರಿಯ ಸಂಪನ್ಮೂಲ ವ್ಯಕ್ತಿ
ಡಾ. ಬೀರೇಶ್ ಕುಮಾರ್ ವಂದಿಸಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.
ಮನಮೋಹನ ಎಂ ಕಾರ್ಯಕ್ರಮವನ್ನು ನಿರೂಪಿಸಿದರು.