ದೇರಾಜೆ ಸೀತಾರಾಮಯ್ಯ :
ಕನ್ನಡ ನಾಡಿನ ಶ್ರೇಷ್ಠ ಕಲಾವಿದ ಮತ್ತು ಸಾಹಿತಿಗಳಲ್ಲೊಬ್ಬರು. ಯಕ್ಷಗಾನ-ತಾಳಮದ್ದಳೆ ಕಲಾಲೋಕದಲ್ಲಿ ತಮ್ಮ ವಾಕ್ ವೈಖರಿ-ಧ್ವನಿ-ಅರ್ಥ-ರಸ ವಿಲಾಸದಿಂದ ಇತಿಹಾಸ ಸೃಷ್ಟಿಸಿದವರು. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಟೇಲ ಮನೆತನದ ಮಂಗಲ್ಪಾಡಿ ಕೃಷ್ಣಯ್ಯ-ಸುಬ್ಬಮ್ಮ ದಂಪತಿಗಳ ಪುತ್ರನಾಗಿ 17-11-1914ರಲ್ಲಿ ಜನಿಸಿದವರು. ‘ಚೊಕ್ಕಾಡಿ ಮೇಳ’ವನ್ನು ಪ್ರಾರಂಭಿಸಿ ಮುಂದೆ ನಾಟಕದಲ್ಲೂ ಅಭಿರುಚಿಯನ್ನು ಪಡೆದುಕೊಂಡ ದೇರಾಜೆಯವರು, ಅದಕ್ಕೆ ‘ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ’ ಎಂದು ನಾಮಕರಣ ಮಾಡಿದರು. ತಾಳಮದ್ದಳೆ-ಯಕ್ಷಗಾನ ಪ್ರಕಾರದಲ್ಲಿ ಮಾತಿನ ಶಕ್ತಿ-ಸೂಕ್ಷ್ಮತೆಗಳನ್ನೂ ಅಭಿನಯದ ಮೂಲಕ ಕಂಡುಕೊಳ್ಳಬಹುದಾದ ಅರ್ಥ-ಅರ್ಥವಂತಿಕೆಯನ್ನೂ ಜೊತೆಗೆ ಪರದೆ, ಪರಿಕರಗಳು, ವೇಷ ಭೂಷಣಗಳು, ತಂತ್ರವಿಶೇಷಗಳ ಮೂಲಕ, ಹೊಸ ಸಂವೇದನೆಗಳ ಮೂಲಕ ಶೋತೃಗಳ ಭಾವಲೋಕದಲ್ಲಿ ಯಕ್ಷಗಾನವನ್ನು ಕುಣಿಸಿದವರು. ತಾವು ರಚಿಸಿದ ‘ಶ್ರೀರಾಮಚರಿತಾಮೃತಂ’ ಗ್ರಂಥದಿಂದ ಬಂದ ಹಣವನ್ನು ಚೊಕ್ಕಾಡಿಯ ಶ್ರೀರಾಮ ದೇವಸ್ಥಾನದ ನಿರ್ಮಾಣ ಮತ್ತು ನಿರ್ವಹಣೆಗೆ ಅನುಕೂಲವಾಗುವಂತೆ ವಿನಿಯೋಗಿಸಿದವರು. ಶ್ರೀಮನ್ಮಹಾಭಾರತ ಕಥಾಮೃತಂ, ರಾಮ ರಾಜ್ಯದ ರೂವಾರಿ, ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯ ಪೂರ್ವರಂಗ ಮುಂತಾದ ಸಾಹಿತ್ಯ, ಧರ್ಮದಾಸಿ, ಕೃಷ್ಣಸುಧಾಮ ಮುಂತಾದ ನಾಟಕ, ವಿಚಾರವಲ್ಲರಿ, ಧರ್ಮ ದರ್ಶನ ಮುಂತಾದ ವೈಚಾರಿಕ, ಯಕ್ಷಗಾನ ವಿವೇಚನೆ ಪ್ರಬಂಧ, ಭೀಷ್ಮಾರ್ಜುನ, ಸುಭದ್ರಾರ್ಜುನ ಮುಂತಾದ ಯಕ್ಷಗಾನ ಪ್ರಸಂಗ ಕೃತಿಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ, ಪುರಾಣ, ಇತಿಹಾಸ, ತತ್ತ್ವ ಶಾಸ್ತ್ರದ ಪಾಂಡಿತ್ಯವಿದ್ದ ದೇರಾಜೆ ಈ ನಾಡಿನ ನಿಜವಾದ ಕಲಾಪ್ರತಿಭೆ.
ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ :
ಯಕ್ಷಗಾನ ಒಂದು ಸಂಕೀರ್ಣ ಕಲೆ. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಶಿಸ್ತಿರುವ, ಜಾನಪದದ ಸೊಗಡಿನ ಕಲೆ.
ಕರ್ನಾಟಕದಲ್ಲಿ 12ನೆಯ ಶತಮಾನದಲ್ಲಿದ್ದ ಗಾನ ಸಂಪ್ರದಾಯ ಯಕ್ಷಗಾನವಾಗಿ ನಾಟಕದ ರೂಪ ಪಡೆದು ಬಯಲಾಟ, ದಶಾವತಾರ ಆಟ. ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ, ತಾಳಮದ್ದಳೆ ಎಂಬ ರೂಪಗಳಿಂದ ರೂಢಿಗೆ ಬಂದಂತೆ ಕಾಣುತ್ತದೆ. ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಈ ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವೇ ಯಕ್ಷಗಾನ.
ವಿವೇಕಾನಂದ ಕಾಲೇಜಿನ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರದ ಉದ್ದೇಶ ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ಯಕ್ಷಗಾನದ ಅಜ್ಞಾತ ಕಲಾಕಾರರನ್ನು ಹುಡುಕಿ ಅವರ ಯಕ್ಷಗಾನದ ಕೊಡುಗೆಯನ್ನು ಸಮಾಜದ ಮುಂದಿಡುವುದು. ಯಕ್ಷಗಾನ ಸಾಹಿತ್ಯ, ಮುಖವರ್ಣಿಕೆ, ಪ್ರಸಾಧನ, ಅರ್ಥಗಾರಿಕೆ, ನೃತ್ಯ, ಚಿತ್ರಕಲೆ, ಸಂಗೀತ, ಗೊಂಬೆಗಳ ನಿರ್ಮಾಣ ಈ ಕ್ಷೇತ್ರದ ಸಾಧಕರ ಕುರಿತು ಪುಸ್ತಕ ಪ್ರಕಟಣೆ, ಸಾಕ್ಷ್ಯ ಚಿತ್ರ, ಹಳೆಯ ಯಕ್ಷಗಾನ ಕೃತಿಗಳ ಸಂಗ್ರಹ ಮುಂತಾದ ಕಾರ್ಯ ವಿಸ್ತಾರವನ್ನೊಳಗೊಂಡ ಕೇಂದ್ರ. ಹಳೆಯ ಯಕ್ಷಗಾನ ಪ್ರಸಂಗಗಳನ್ನು ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ಕಲಿಸಿ ರಂಗಪ್ರಯೋಗ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ. ಯಕ್ಷಗಾನ ವೈಭವ, ಯಕ್ಷಗಾನ ತಾಳಮದ್ದಳೆ ಕೂಟ, ಯಕ್ಷಗಾನ ಕೃತಿ ರಚನೆಕಾರರಿಗೆ ಗೌರವ ಸಮರ್ಪಣೆ, ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ಮುಂತಾದ ಯಕ್ಷಗಾನದ ಹೊಸ ಪ್ರಯೋಗಗಳ ಕುರಿತ ಅರಿವು ಮೂಡಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದೆ.
The College is located in the outskirts of Puttur town beside Mysore – Mangalore State Highway, spread over a sprawling campus of nearly 50 acres dotted with green vegetation.
COPYRIGHT © 2024 VIVEKANANDA COLLEGE OF ARTS, SCIENCE AND COMMERCE (AUTONOMOUS) PUTTUR. ALL RIGHTS RESERVED.