News & Updates

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ ಭವ್ಯ ಭಾರತದ ನಿರ್ಮಾತೃ ನಾವಾಗಬೇಕು: ಡಾ. ಧನಂಜಯ ಕುಂಬ್ಳೆ.


ಪುತ್ತೂರು: ಜೂನ್ 12; ದೇಶದ ಬಗೆಗೆ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಬೇಕು. ನಮ್ಮ ದೇಶದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡಬೇಕು.ಪರಸ್ಪರ ಪ್ರೀತಿ ಪ್ರೇಮ ವನ್ನು ಹಂಚಿಕೊಂಡು ಬಾಳಬೇಕು ಹಾಗೂ ಭವ್ಯ ಭಾರತವನ್ನು ಕಟ್ಟುವಲ್ಲಿ ಸಫಲರಾಗಿ ಸದೃಢ ಪ್ರಜೆಗಳಾಗಿ ಪ್ರಜ್ವಲಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ‘ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿವೇಕಾನಂದ ವಿದ್ಯಾಸಂಸ್ಥೆ ಕಲಿಸಿಕೊಡುವ ಆಚಾರ ವಿಚಾರ, ಸಂಸ್ಕೃತಿ ಮಹತ್ವವಾದದ್ದು. ಇಂತಹ ಹೆಮ್ಮೆಯ ಸಂಸ್ಥೆ ಕರಾವಳಿಯ ಶಾಂತಿನಿಕೇತನ ಎನಿಸಿಕೊಳ್ಳಬೇಕು. ಈ ಸಂಸ್ಥೆಯ ವಿದ್ಯಾರ್ಥಿಗಳ ಎದೆ ಬಗೆದು ನೋಡಿದಾಗ ಭಾರತ ಕಾಣಬೇಕು. ವಿದ್ಯಾರ್ಥಿಗಳು ಭಾವ ಭಾರತದ ಬಗ್ಗೆ ಅರಿತುಕೊಂಡು ಗತವೈಭವದ ಕುರಿತಾದ ಭಾವನೆಯನ್ನು ತಮ್ಮಲ್ಲಿ ಮೂಡಿಸಿಕೊಳ್ಳಬೇಕು.ಆಕಾಶದಿಂದ ಬಿದ್ದ ಮಳೆ ನೀರು ಒಂದೇ ಸಮುದ್ರಕ್ಕೆ ಸೇರುವಂತೆ ನಾವು ಯಾವ ದೇವರಿಗೆ ಪೂಜೆ ಮಾಡಿದರೂ ಒಂದೇ ದೇವರಿಗೆ ಸಲ್ಲುತ್ತದೆ ಎಂಬುದನ್ನು ಅರಿತುಕೊಳ್ಳಬೇಕು, ಇದೇ ಭಾವ ಭಾರತ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಇನ್ನೋರ್ವ ಅತಿಥಿ ನಿವೃತ್ತ ಸೇನಾಧಿಕಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ವಿವೇಕಾನಂದ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸಂಸ್ಥೆ. ನಮ್ಮ ಹಿರಿಯರು ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇದಕ್ಕಾಗಿ ಉತ್ತಮ ನಾಯಕನ ಅವಶ್ಯಕತೆಯಿದೆ. ನಾಯಕತ್ವ ಸರಿಯಾಗಿದ್ದರೆ ನಾವು ಕಲ್ಪಿಸಿದ ರಾಷ್ಟ್ರ ನಿರ್ಮಾಣ ಖಂಡಿತವಾಗಿಯೂ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣ ಭಟ್ ಮಾತನಾಡಿ, ಜೀವನದಲ್ಲಿ ಬೇಡದ ಸಂಗತಿಗಳನ್ನು ತೊಡೆದು ಹಾಕಿ ಬೇಕಾದ ಸಂಗತಿಗಳನ್ನು ಮಾತ್ರ ಇರಿಸಿಕೊಳ್ಳಬೇಕು. ಏನಾದರೂ ಸಾಧನೆ ಮಾಡಬೇಕಾದರೆ ಆಸಕ್ತಿ, ಕೌಶಲ್ಯ, ಪರಿಶ್ರಮದ ಜೊತೆಗೆ ಆತ್ಮವಿಶ್ವಾಸವೂ ಇರಬೇಕು. ಜೀವನದಲ್ಲಿ ಸೋತರೆ ಕುಗ್ಗದೆ ಮರಳಿ ಪ್ರಯತ್ನ ಮಾಡುತ್ತಲೇ ಇರಬೇಕು.ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ದತ್ತಿನಿಧಿ ಬಹುಮಾನವನ್ನು ಆಯ್ದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ. ಎನ್, ಪ್ರಾಚಾರ್ಯ ವಿಷ್ಣುಗಣಪತಿ ಭಟ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್ ಜೋಡುಕಲ್ಲು, ಕಾರ್ಯದರ್ಶಿ ರಕ್ಷಿತ್,
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತ ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ವಿಖ್ಯಾ ಸ್ವಾಗತಿಸಿ, ವಿದ್ಯಾರ್ಥಿ ಹರಿಪ್ರಸಾದ್ ವಂದಿಸಿದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ದಿವ್ಯಶ್ರೀ ವಜ್ರದುಂಬಿ ಹಾಗೂ ತೃತೀಯ ಬಿ. ಎ ವಿದ್ಯಾರ್ಥಿ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related News

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿಕಾರ್ಯಾಗಾರ ಕಾರ್ಯಕ್ರಮ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ…

ಪುತ್ತೂರು,ಜು.15: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು.ನಾವು…

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಹಸಿರು ವಾತಾವರಣ ನಮ್ಮದಾಗಬೇಕು:ಡಾ.ದೇವಿಪ್ರಸಾದ್. ಕೆ .ಎನ್

ಪುತ್ತೂರು.ಜು,15: ಶುದ್ಧವಾದ ಗಾಳಿ,ಒಳ್ಳೆಯ ವಾತಾವರಣ ನಮಗೆದೊರಕಬೇಕೆಂದರೆ ಅಲ್ಲಿ…

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ವಿವೇಕ ಸಂಜೀವಿನಿ-ಹಸಿರು ಕ್ಯಾಂಪಸ್ ಅಭಿಯಾನ

ತ್ತೂರು:ಜು.13; ವಿಶೇಷ ಮೌಲ್ಯಗಳುಳ್ಳಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳುಹಾಗೂ…