
ಪುತ್ತೂರು ಜು.31: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ
(ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕರಾಗಿ ಕಾರ್ಯ
ನಿರ್ವಹಿಸುತ್ತಿರುವ ಜಯರಾಮ ಪಿ. ಹಾಗು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ
ಕಛೇರಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಸತ್ಯನಾರಾಯಣ ಅವರಿಗೆ
ಬೀಳ್ಕೊಡುಗೆ ಸಮಾರಂಭ ನಡೆಯಿತು.
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕ ಮತ್ತು
ಶಿಕ್ಷಕೇತರ ಸಂಘದ ಆಶ್ರಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ
ಮಾತನಾಡಿದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ
ಮುರಳಿಕೃಷ್ಣ.ಕೆ.ಎನ್, ವಿವೇಕಾನಂದ ಸಂಸ್ಥೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು
ಕೆಲಸ ಮಾಡಿದ ಇವರಿಬ್ಬರ ಕಾರ್ಯವೈಖರಿ ಸಂಸ್ಥೆ ಸದಾ ಸ್ಮರಿಸುತ್ತದೆ.
ವಿದ್ಯಾರ್ಥಿಗಳೊಂದಿಗೆ ಬೆರೆತು ಕೆಲಸ ಮಾಡುವುದರಲ್ಲಿ ಇವರಿಬ್ಬರ ಕಾರ್ಯ
ಶ್ಲಾಘನೀಯ. ನಿವೃತ್ತಿಯ ನಂತರದ ಜೀವನ ಉತ್ತಮ ಹವ್ಯಾಸಗಳೊಂದಿಗೆ
ಹಸನಾಗಲಿ ಎಂದರು.
ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ್, ಕಾಲೇಜಿನ ಪ್ರಾಂಶುಪಾಲ ಪ್ರೊ.
ಶ್ರೀಕೃಷ್ಣ ಗಣರಾಜ್ ಭಟ್, ಶಿಕ್ಷಕ ಸಂಘದ ಅಧ್ಯಕ್ಷ ಡಾ. ಸೌಮಿತ್ರ ಹಾಗೂ
ಶಿಕ್ಷಕೇತರ ಸಂಘದ ಅಧ್ಯಕ್ಷ ಎನ್. ಮೋಹನ್ ಅವರು ನಿವೃತ್ತ ಜೀವನಕ್ಕೆ
ಶುಭಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತಿ ಹೊಂದುತ್ತಿರುವ ಗ್ರಂಥಾಲಯ ಪಾಲಕ ಜಯರಾಮ್ ಪಿ.
ಹಾಗೂ ಕಚೇರಿ ಸಹಾಯಕ ಎಸ್. ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಗಣಕತಂತ್ರ ವಿಭಾಗದ ಕಂಪ್ಯೂಟರ್ ಲ್ಯಾಬ್
ಸಹಾಯಕಿ ನಿರೀಕ್ಷಾ ಹೆಚ್. ಪ್ರಾರ್ಥಿಸಿ, ಶಿಕ್ಷಕೇತರ ಸಂಘದ ಸದಸ್ಯ ಶಿವರಾಮ್ ವಂದಿಸಿ,
ಕಾಲೇಜಿನ ಪರೀಕ್ಷಾ ವಿಭಾಗದ ಸಹಾಯಕಿ ಅಕ್ಷತಾ ಸ್ವಾಗತಿಸಿ, ಕಾರ್ಯಕ್ರಮ
ನಿರೂಪಿಸಿದರು.
