
ಪುತ್ತೂರು, ಸೆ.೨೨: ಸಂಶೋಧನೆ ಎಂಬುದು ನಿರಂತರವಾಗಿ ಹರಿಯುವ
ಅನ್ವೇಷಣೆಯ ಪಯಣ. ಇಲ್ಲಿ ವೈಯಕ್ತಿಕ ಭಾವನೆಗಳಿಗಿಂತ ಸತ್ಯತೆಗೆ
ಪ್ರಾಮುಖ್ಯತೆ. ಪತ್ರಿಕೋದ್ಯಮದಲ್ಲಿ ಸಂಶೋಧನಾ ವಿಧಾನವು ಕೇವಲ ಒಂದು
ಪ್ರಕ್ರಿಯೆಯಲ್ಲ, ಅದು ಸತ್ಯದ ಅನಾವರಣಕ್ಕೆ, ಮಾಹಿತಿಯ ನಿಖರತೆಯನ್ನು
ಪರೀಕ್ಷಿಸಲು ಸಹಾಯ ಮಾಡುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಥಮಿಕ
ಹಾಗೂ ದ್ವಿತೀಯ ಮೂಲಗಳಿಂದ ಆಳವಾದ ಮಾಹಿತಿ ಸಂಗ್ರಹಿಸುವ ಕೌಶಲ್ಯವನ್ನು
ಕರಗತ ಮಾಡಿಕೊಳ್ಳಬೇಕು. ಏಕೆಂದರೆ, ಸ್ಪಷ್ಟವಾದ ವಿಷಯವನ್ನು
ಆಯ್ದುಕೊಂಡು ಸಂಶೋಧನೆ ನಡೆಸಿದರೆ ಮಾತ್ರ ಉತ್ತಮ ಸುದ್ದಿ ನೀಡಲು
ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜು (ಸ್ವಾಯತ್ತ) ಇದರ
ಪತ್ರಿಕೋದ್ಯಮ ವಿಭಾಗದ ಸಹ ಪ್ರಾದ್ಯಾಪಕ ಪ್ರೊ. ಡಾ. ಶ್ರೀನಿವಾಸ್ ಹೊಡೆಯಾಳ
ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಇದರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಇದರ
ಸಹಯೋಗದೊಂದಿಗೆ ನಡೆದ ‘ರಿಸರ್ಚ್ ಮೆಥಡಾಲಜಿ – ಅಂಡರ್ ಸ್ಟ್ಯಾಂಡಿAಗ್ ಬೇಸಿಕ್ಸ್’
ವಿಷಯದ ಕುರಿತು ನಡೆದ ಕಾರ್ಯಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ವಿಭಾಗದ ಡೀನ್ ಡಾ.
ವಿಜಯ ಸರಸ್ವತಿ ಬಿ ಅಧ್ಯಕ್ಷೀಯ ನುಡಿಗಳನ್ನಾಡಿ, ಒಂದು ವಿಷಯವನ್ನು
ನೋಡುವ ದೃಷ್ಟಿಕೋನವೇ ನಿಜವಾದ ಸಂಶೋಧನೆ. ಅದರಲ್ಲೂ
ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರವೃತ್ತಿ ಅತ್ಯಂತ ಅಗತ್ಯ.
ಎಲ್ಲಿ ಅಭ್ಯಾಸದ ಅಗತ್ಯ ಇದೆಯೋ, ಅಂತಹ ವಿಷಯಗಳನ್ನು ಗುರುತಿಸಿ
ಸಂಶೋಧನೆಗೆ ಒಳಪಡಿಸಬೇಕು. ನಾವು ನಡೆಸುವ ಪ್ರತಿಯೊಂದು
ಸoಶೋಧನೆಯೂ ಸಮಾಜಕ್ಕೆ ಉಪಯುಕ್ತವಾದ ಕೊಡುಗೆಯಾಗಬೇಕು
ಎಂದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಜೆ ರೈ
ಸ್ವಾಗತಿಸಿ, ಪ್ರಸಾದಿನಿ ಕೆ ತಿಂಗಳಾಡಿ ವಂದಿಸಿ, ಧನ್ಯಶ್ರೀ ನಿರೂಪಿಸಿದರು.
